
ಕಡತ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ಆರ್ಯ ಈಡಿಗ ಸಮುದಾಯದ ಎಲ್ಲ ಪಂಗಡದ ಮಹಿಳೆಯರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಮಹಿಳಾ ಶಕ್ತಿ ಪ್ರದರ್ಶಿಸುವ ಉದ್ದೇಶದಿಂದ ಇದೇ 4ರಂದು ನಿಮ್ಹಾನ್ಸ್‌ನ ಕನ್ವೆನ್ಷನ್ ಸೆಂಟರ್‌ನಲ್ಲಿ ನಾರಿ ಶಕ್ತಿ ರಾಷ್ಟ್ರೀಯ ಸಮ್ಮೇಳನ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಆರ್ಯ ಈಡಿಗ ಮಹಿಳಾ ಸಂಘದ ಸಂಸ್ಥಾಪಕ ಅಧ್ಯಕ್ಷೆ ನಳಿನಾಕ್ಷಿ ಸಣ್ಣಪ್ಪ, ಅಧ್ಯಕ್ಷೆ ಅಮಿತ ಆನಂದ್ ಹಾಗೂ ಪ್ರಧಾನ ಕಾರ್ಯದರ್ಶಿ ಉಮಾ ಶ್ರೀನಿವಾಸ್ ಈ ಕುರಿತ ವಿವರ ನೀಡಿದರು.
‘ಸಮುದಾಯದ ಪರವಾಗಿ ಸರ್ಕಾರಿ ಇಲಾಖೆಗಳು, ಮಂಡಳಿಗಳು ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಮರ್ಪಕ ಪ್ರಾತಿನಿಧ್ಯ ಪಡೆಯಲು, ಏಕತೆ ಮತ್ತು ಶಕ್ತಿ ಪ್ರದರ್ಶದ ಮೂಲಕ ಸಕಾರಾತ್ಮಕ ಬದಲಾವಣೆಗೆ ಮಾರ್ಗ ಸೃಷ್ಟಿಸುವುದು ಸಮಾವೇಶದ ಆಶಯವಾಗಿದೆ’ ಎಂದು ತಿಳಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಮುದಾಯದ 30 ಮಂದಿ ಸಾಧಕರನ್ನು ಸನ್ಮಾನಿಸಿ, ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ‘26 ಪಂಗಡಗಳ ಏಕತೆ–ನಮ್ಮ ಶಕ್ತಿ’ ಕುರಿತು ಚರ್ಚೆ–ಸಂವಾದ, ವಿವಿಧ ಸ್ಪರ್ಧೆಗಳು ಮತ್ತು ಕಲಾ ಪ್ರದರ್ಶನಗಳು ಕಾರ್ಯಕ್ರಮದಲ್ಲಿ ಇರಲಿವೆ.
‘ರಾಷ್ಟ್ರಮಟ್ಟದ ಈ ಸಮ್ಮೇಳನವು ಸಮುದಾಯದ ಮಹಿಳಾ ಸಬಲೀಕರಣದ ಮೂಲಕ ಮುಂದಿನ ದಿಕ್ಕು ಮತ್ತು ಹಾದಿಯನ್ನು ನಿರ್ಧರಿಸುವ ಮಹತ್ವದ ವೇದಿಕೆಯಾಗಲಿದೆ. ಹೆಣ್ಣುಮಕ್ಕಳಿಗೆ ಶಿಕ್ಷಣ, ವಿದ್ಯಾರ್ಥಿವೇತನ ಮತ್ತು ವಿದ್ಯಾರ್ಥಿನಿಲಯ ಸೌಲಭ್ಯ ಕಲ್ಪಿಸುವುದು, ಬಡ ಮತ್ತು ನಿರಾಶ್ರಿತ ಮಹಿಳೆಯರ ಪುನರ್ವಸತಿಗೆ ಸಹಕಾರ ನೀಡುವುದು, ವೃತ್ತಿಪರ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳಿಗೆ ಉತ್ತೇಜನ ನೀಡುವುದು ನಮ್ಮ ಉದ್ದೇಶವಾಗಿದೆ’ ಎಂದರು.
‘ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಸಮಾವೇಶ ಉದ್ಘಾಟಿಸಲಿದ್ದು, ಸಚಿವರಾದ ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಮಧು ಬಂಗಾರಪ್ಪ, ಸಂಸದ ಕೋಟ ಶ್ರೀನಿವಾಸ ಪೂಜಾರಿ , ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ, ಶಾಸಕರಾದ ಎಚ್.ಆರ್. ಗವಿಯಪ್ಪ, ಉಮಾನಾಥ್ ಕೋಟ್ಯಾನ್, ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ಸೋಲೂರಿನ ನಾರಾಯಣಗುರು ಮಹಾಸಂಸ್ಥಾನದ ವಿಖ್ಯಾತಾನಂದ ಸ್ವಾಮೀಜಿ, ನಿಟ್ಟೂರು ನಾರಾಯಣ ಗುರು ಮಹಾಸಂಸ್ಥಾನದ ಅಧ್ಯಕ್ಷ ರೇಣುಕಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.