ADVERTISEMENT

ಬಿ.ಎಸ್‌.ಲಿಂಗದೇವರು ವಿರುದ್ಧ ಆರೋಪ: ವಿಚಾರಣೆಗೆ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2019, 19:57 IST
Last Updated 11 ಸೆಪ್ಟೆಂಬರ್ 2019, 19:57 IST
   

ಬೆಂಗಳೂರು: ಕನ್ನಡದ ‘ನಾತಿಚರಾಮಿ’ ಚಿತ್ರಕ್ಕೆ ಐದು ರಾಷ್ಟ್ರಪ್ರಶಸ್ತಿ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಆಯ್ಕೆ ಸಮಿತಿ ಸದಸ್ಯರಾಗಿದ್ದ ಬಿ.ಎಸ್.ಲಿಂಗದೇವರು ವಿರುದ್ಧದ ಆರೋಪಗಳ ಬಗ್ಗೆ ವಿಚಾರಣೆ ಪೂರ್ಣಗೊಳಿಸಿ ಸೂಕ್ತ ಕಾನೂನು ಕ್ರಮ ಜರುಗಿಸಿ’ ಎಂದು ರಾಷ್ಟ್ರೀಯ ಚಲನಚಿತ್ರೋತ್ಸವ ನಿರ್ದೇಶನಾಲಯಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಈ ಕುರಿತಂತೆ ಚಿತ್ರ ನಿರ್ದೇಶಕ ದಯಾಳ್ ಪದ್ಮನಾಭನ್ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಲೇವಾರಿ ಮಾಡಿದೆ.

ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಕೀಲರು ಪ್ರಮಾಣ ಪತ್ರ ಸಲ್ಲಿಸಿ, ‘ಅರ್ಜಿದಾರರು ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸುವ ಮುನ್ನ ನೀಡಲಾಗಿರುವ ಆರೋಪಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಚಲನಚಿತ್ರೋತ್ಸವ ನಿರ್ದೇಶನಾಲಯ ವಿಚಾರಣೆ ಆರಂಭಿಸಿದೆ’ ಎಂದು ತಿಳಿಸಿದರು.

ADVERTISEMENT

ಈ ಪ್ರಮಾಣಪತ್ರ ಪರಿಗಣಿಸಿದ ನ್ಯಾಯಪೀಠ, ‘ಲಿಂಗದೇವರು ವಿರುದ್ಧದ ಆರೋಪಗಳು ಸಾಬೀತಾದರೆ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ’ ಎಂದು ನಿರ್ದೇಶಿಸಿತು.

ಆರೋಪಗಳೇನು?: ಬಿ.ಎಸ್.ಲಿಂಗದೇವರು ‘ಅಕ್ಕ ಕಮ್ಯುನಿಕೇಷನ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ’ಯ ನಿರ್ದೇಶಕರಾಗಿದ್ದಾರೆ ಮತ್ತು ‘ನಾತಿಚರಾಮಿ’ ಚಿತ್ರದ ಸಂಕಲನಕ್ಕೆ ‘ಅಕ್ಕ’ ಕಂಪನಿ ಸಹಾಯ ಮಾಡಿದೆ. ಇದರಿಂದಾಗಿ ಲಿಂಗದೇವರು ‘ನಾತಿಚರಾಮಿ’ ಚಿತ್ರದ ನಿರ್ಮಾಣದಲ್ಲಿ ನೇರ ಪಾತ್ರ ವಹಿಸಿರುವುದು ಸ್ಪಷ್ಟವಾಗಿದೆ. ಆದರೆ, ಆಯ್ಕೆ ಸಮಿತಿ ಮುಂದೆ ನೀಡಲಾಗಿದ್ದ ಘೋಷಣಾ ಪ್ರಮಾಣ ಪತ್ರದಲ್ಲಿ ಈ ಅಂಶವನ್ನು ಬಚ್ಚಿಡಲಾಗಿದೆ’ ಎಂದು ಅರ್ಜಿದಾರರು ಆರೋಪಿಸಿದ್ದರು.

‘ನಾತಿಚರಾಮಿ ಚಿತ್ರಕ್ಕೆ ನೀಡಿರುವ 5 ರಾಷ್ಟ್ರೀಯ ಪ್ರಶಸ್ತಿಗಳನ್ನು ಹಿಂಪಡೆಯಬೇಕು. ಲಿಂಗದೇವರು ಹಾಗೂ ಚಿತ್ರ ನಿರ್ಮಾಪಕ ಎಂ. ರಮೇಶ್ ವಿರುದ್ಧ ಕ್ರಿಮಿನಲ್ ಪ್ರಕ್ರಿಯೆ ಜರುಗಿಸಲು ಚಲನಚಿತ್ರೋತ್ಸವ ನಿರ್ದೇಶನಾಲಯಕ್ಕೆ ನಿರ್ದೇಶಿಸಬೇಕು’ ಎಂದು ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.