ADVERTISEMENT

ರಾಷ್ಟ್ರೀಯ ತೋಟಗಾರಿಕೆ ಮೇಳ: ಕುತೂಹಲದಿಂದ ಪಾಲ್ಗೊಂಡ ರೈತರು, ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2025, 16:06 IST
Last Updated 28 ಫೆಬ್ರುವರಿ 2025, 16:06 IST
ಬೆಂಡೆಕಾಯಿ ತಾಕು
ಬೆಂಡೆಕಾಯಿ ತಾಕು   

ಹೆಸರಘಟ್ಟ: ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಆವರಣದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ತೋಟಗಾರಿಕಾ ಮೇಳಕ್ಕೆ ಶುಕ್ರವಾರ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಶಾಲಾ-ಕಾಲೇಜು ವಿದ್ಯಾರ್ಥಿಗಳು ಭೇಟಿ ನೀಡಿದರು.

ನೆರೆಯ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶಗಳಿಂದಲೂ ರೈತರು ಮೇಳಕ್ಕೆ ಭೇಟಿ ನೀಡಿದ್ದರು. ಹಣ್ಣು, ತರಕಾರಿಗಳ ಪ್ರಾತ್ಯಕ್ಷಿಕೆಗಳು, ಆಧುನಿಕ ಬೇಸಾಯದ ಯಂತ್ರೋಪಕರಣಗಳು, ಮೌಲ್ಯ ವರ್ಧಿತ ಉತ್ಪನ್ನಗಳು ಹಾಗೂ ವಿವಿಧ ಬಗೆಯ ತರಕಾರಿ ತಾಕುಗಳನ್ನು ವೀಕ್ಷಿಸಿದ ಸಾರ್ವಜನಿಕರು, ಅವುಗಳ ಬಗ್ಗೆ ವಿಜ್ಞಾನಿಗಳಿಂದ ಮಾಹಿತಿ ಪಡೆದುಕೊಂಡರು.

ತೋಟಗಾರಿಕೆ ಮೇಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ವಿದ್ಯಾರ್ಥಿಗಳು

‘ನಮ್ಮದು ನಾಲ್ಕು ಎಕರೆ ಕೃಷಿ ಭೂಮಿ ಇದ್ದು, ಅದರಲ್ಲಿ ಆಧುನಿಕ ಬೇಸಾಯ ಮಾಡುವ ಉದ್ದೇಶವಿದೆ. ಈ ಮೇಳದಲ್ಲಿ ಕೃಷಿ ಬಗೆಗಿನ ನೂತನ ಆವಿಷ್ಕಾರಗಳನ್ನು ನೋಡಿ, ತಿಳಿದು ಅಳವಡಿಸಿಕೊಳ್ಳಬೇಕೆಂದು ಮೇಳಕ್ಕೆ ಬಂದಿದ್ದೇನೆ’ ಎಂದು ರಾಮನಗರದ ಮಂಜುನಾಥ್ ಹೇಳಿದರು.

ADVERTISEMENT

ಮೇಳದಲ್ಲಿ ಹೂವಿನ ತಾಕುಗಳು ಜನರನ್ನು ಹೆಚ್ಚು ಆಕರ್ಷಿಸುತ್ತಿದ್ದವು. ಹೂವಿನ ತಾಕುಗಳಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ತರಕಾರಿ ತಾಕುಗಳು ಹಚ್ಚ ಹಸಿರಿನಿಂದ ಕೂಡಿದ್ದು ಸಾರ್ವಜನಿಕರ ಗಮನ ಸೆಳೆದವು.

ನಕ್ಷತ್ರ ಕುಂಬಳ ತಾಕು

ಗಮನ ಸೆಳೆದ ನಕ್ಷತ್ರ ಕುಂಬಳ: ನಕ್ಷತ್ರ ಆಕಾರದ ಕಿರುಕುಂಬಳ ಎಲ್ಲರ ಗಮನ ಸೆಳೆಯಿತು. ಇದು ಹಬ್ಬುವುದಿಲ್ಲ. ಬಹಳ ಸುಲಭವಾಗಿ ನಿರ್ವಹಣೆ ಮಾಡಬಹುದು. ಬೀಜ ನಾಟಿ ಮಾಡಿದ ದಿನದಿಂದ 30ರಿಂದ 40 ದಿನಗಳಲ್ಲಿ ಹೂವು ಬಿಡುತ್ತದೆ. 40ರಿಂದ 50 ದಿನಗಳ ಅವಧಿಯಲ್ಲಿ ಇಳುವರಿ ಬರಲಿದ್ದು, ಒಂದು ಕುಂಬಳ 750 ಗ್ರಾಂ ತೂಕದ ಕಾಯಿಗಳನ್ನು ಬಿಡುತ್ತದೆ. ಎಕರೆಗೆ 75 ಟನ್ ಇಳುವರಿ ಬರಲಿದೆ. ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದ್ದು, ಪ್ರತಿ ಕೆಜಿಗೆ ₹90 ಗಳಿಸಬಹುದಾಗಿದೆ. ಅಲ್ಲದೆ ಇದರ ಬೀಜದಲ್ಲಿ ಎಣ್ಣೆಯನ್ನು ಸಹ ಉತ್ಪಾದಿಸಬಹುದಾಗಿದೆ. ಇದು ರೈತರಿಗೆ ಲಾಭದಾಯಕ ಕೃಷಿ. ಈ ಗಿಡಕ್ಕೆ ರೋಗ ತಗಲುವುದು ಕಡಿಮೆ. ನಿರ್ವಹಣೆಯು ಸುಲಭ ಇದ್ದು ಎಲ್ಲಾ ಹವಾಗುಣದಲ್ಲಿ ಕೂಡ ಬೆಳೆಯಬಹುದಾಗಿದೆ. ಒಂದು ಗಿಡದಲ್ಲಿ 9 ಕಾಯಿಯವರೆಗೂ ಬಿಡುತ್ತದೆ ಎಂದು ವಿಜ್ಞಾನಿ ಡಾ. ರಾಜಶಂಕರ್ ತಿಳಿಸಿದರು.

ಆಧುನಿಕ ಕೃಷಿ ಉಪಕರಣಗಳ ಬಗ್ಗೆ ವಿಜ್ಞಾನಿಗಳಿಂದ ಮಾಹಿತಿ ಪಡೆದ ರೈತರು
ತೋಟಗಾರಿಕೆ ಮೇಳದಲ್ಲಿ ವಿದ್ಯಾರ್ಥಿಗಳು ಮಾಹಿತಿ ಪಡೆದುಕೊಂಡರು

Cut-off box - ರೋಗ ನಿರೋಧಕ ಬೆಂಡೆಕಾಯಿ ಕಡು ಹಸಿರು ಬಣ್ಣದಿಂದ ಕೂಡಿರುವ ಅರ್ಕ ನಿಕಿತಾ ಬೆಂಡೆಕಾಯಿಯಲ್ಲಿ ಅಯೋಡಿನ್ ಫೈಬರ್ ಅಂಶ ಹೇರಳವಾಗಿದ್ದು ಮೂಳೆ ಗಟ್ಟಿಯಾಗಲು ಸಹಕಾರಿಯಾಗುವಂತಹ ಕ್ಯಾಲ್ಸಿಯಂ ಅಂಶವನ್ನು ಹೊಂದಿದೆ. ಸಕ್ಕರೆ ಕಾಯಿಲೆಗೆ ಇದು ರಾಮಬಾಣ. ಬಿಡಿ ಬಿಡಿಯಾಗಿ ಕತ್ತರಿಸಿ ಒಂದು ಲೋಟ ನೀರಿನಲ್ಲಿ ಇಟ್ಟು ಮರುದಿನ ಅದರ ಲೋಳೆ ಸಹಿತ ನೀರು ಸೇವಿಸಿದರೆ ಸಕ್ಕರೆ ಕಾಯಿಲೆಯನ್ನು ಹತೋಟಿಯಲ್ಲಿ ಇಡಬಹುದು. ಈ ಬೆಂಡೆಕಾಯಿ ಗಿಡಕ್ಕೆ 80ರಿಂದ 90 ದಿನಗಳವರೆಗೆ ನಂಜುರೋಗ ಸುಳಿಯುವುದಿಲ್ಲ ಸುಲಭವಾಗಿ ಬೀಜ ಉತ್ಪಾದನೆ ಮಾಡಬಹುದಾಗಿದೆ. ಮೂರರಿಂದ ನಾಲ್ಕು ತಿಂಗಳ ಬೆಳೆಯಾಗಿದ್ದು 43 ದಿನಗಳಿಗೆ ಇಳುವರಿ ಪ್ರಾರಂಭವಾಗುತ್ತದೆ. ಪ್ರತಿ ಎಕರೆಗೆ 8 ರಿಂದ 9 ಟನ್ ಇಳುವರಿ ಬರುತ್ತದೆ ಎಂದು ಬೆಂಡೆ ವಿಭಾಗದ ವಿಜ್ಞಾನಿ ಡಾ. ಪಿಚ್ಚೆ ಮುತ್ತು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.