
ಡಾ. ಮನಮೋಹನ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಕೋಶದ ಆಶ್ರಯದಲ್ಲಿ ಏರ್ಪಡಿಸಿರುವ ರಾಷ್ಟ್ರೀಯ ಭಾವೈಕ್ಯ ಶಿಬಿರದ ಉದ್ಘಾಟನಾ ಸಮಾರಂಭದ ವೇಳೆ ಕಲಾತಂಡಗಳು ನೃತ್ಯ ಪ್ರದರ್ಶಿಸಿದವು.
ಬೆಂಗಳೂರು: ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಯುವ ಶಕ್ತಿಯ ಪಾತ್ರ ಅತಿಮುಖ್ಯವಾಗಿದ್ದು, ಜ್ಞಾನ ಮತ್ತು ಕೌಶಲದ ಜೊತೆಗೆ ಸಮಾಜ ಸೇವೆಯ ಮನೋಭಾವ ರೂಪಿಸಿಕೊಳ್ಳಬೇಕು ಎಂದು ಕುಲಪತಿ ಪ್ರೊ.ಬಿ.ರಮೇಶ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಡಾ. ಮನಮೋಹನ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಕೋಶದ ಆಶ್ರಯದಲ್ಲಿ ಏರ್ಪಡಿಸಿರುವ ಒಂದು ವಾರ ಅವಧಿಯ ರಾಷ್ಟ್ರೀಯ ಭಾವೈಕ್ಯ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅನೇಕ ಜಾತಿ, ಧರ್ಮ, ಭಾಷೆ ಮತ್ತು ಸಂಸ್ಕೃತಿಗಳ ಮಹಾಸಂಗಮವಾದ ದೇಶದಲ್ಲಿ ರಾಷ್ಟ್ರೀಯ ಸಮಗ್ರತೆಯನ್ನು ಸದಾ ಸಂರಕ್ಷಿಸುವ ಮಹತ್ವದ ಹೊಣೆಗಾರಿಕೆ ದೇಶದ ಯುವ ಪೀಳಿಗೆಯ ಮೇಲಿದೆ ಎಂದು ಅವರು ಪ್ರತಿಪಾದಿಸಿದರು.
ಶಿಬಿರ ಉದ್ಘಾಟಿಸಿ ಮಾತನಾಡಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಆರ್. ಚೇತನ್, ಕೋಮುವಾದ ಮತ್ತು ಪ್ರಾದೇಶಿಕ ಅಸಮತೋಲನದ ಸವಾಲುಗಳನ್ನು ನಿಭಾಯಿಸುವ ಮೂಲಕ ಭಾವೈಕ್ಯತೆ ಕಾಪಾಡಬೇಕಾದ ಅಗತ್ಯವನ್ನು ಒತ್ತಿ ಹೇಳಿದರು.
ರಾಜ್ಯ ಎನ್.ಎಸ್.ಎಸ್. ಅಧಿಕಾರಿಗಳಾದ ಪ್ರತಾಪ್ ಲಿಂಗಯ್ಯ ಮಾತನಾಡಿ, ‘ಕೇವಲ 40 ಸಾವಿರ ಸ್ವಯಂಸೇವಕರ ಪಡೆಯೊಂದಿಗೆ ಪ್ರಾರಂಭವಾದ ಎನ್.ಎಸ್.ಎಸ್. ಇದೀಗ 45 ಲಕ್ಷಕ್ಕೂ ಅಧಿಕ ಕಾರ್ಯಕರ್ತರ ಬೃಹತ್ ಸಂಘಟನೆಯಾಗಿ ಬೆಳೆದಿದ್ದು, ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ’ ಎಂದು ವಿವರಿಸಿದರು.
ವಿಶ್ವವಿದ್ಯಾನಿಲಯದ ಕುಲಸಚಿವ ಎ .ನವೀನ್ ಜೋಸೆಫ್ ಶಿಬಿರದ ಉದ್ದೇಶಗಳನ್ನು ವಿವರಿಸಿದರು. ಎನ್.ಎಸ್.ಎಸ್. ಪ್ರಾದೇಶಿಕ ನಿರ್ದೇಶಕ ಗಿರ್ಧರ್ ಉಪಾಧ್ಯಾಯ್, ಕುಲಸಚಿವ (ಮೌಲ್ಯಮಾಪನ) ಪ್ರೊ.ರಮೇಶ್. ಬಿ. ಕುಡೇನಟ್ಟಿ, ವಿತ್ತಾಧಿಕಾರಿ ಎಂ.ವಿ. ವಿಜಯಲಕ್ಷ್ಮಿ. ಸಿಂಡಿಕೇಟ್ ಸದಸ್ಯರಾದ ಡಾ.ಬಿ.ಆರ್.ಸುಪ್ರೀತ್. ಕೆ.ಪಿ.ಪಾಟೀಲ್ ಮತ್ತು ಫಾದರ್ ಫ್ರಾನ್ಸಿಸ್ ಉಪಸ್ಥಿತರಿದ್ದರು. ಎನ್.ಎಸ್.ಎಸ್. ಸಂಯೋಜಕ ಡಾ.ಎಚ್.ಜಿ.ಗೋವಿಂದೇಗೌಡ ವಂದಿಸಿದರು.
ದೇಶದ ವಿವಿಧ ರಾಜ್ಯಗಳ 15ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳಿಂದ ಎನ್.ಎಸ್.ಎಸ್. ಸ್ವಯಂಸೇವಕರು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.