ಬೆಂಗಳೂರು: ರಾಷ್ಟ್ರೀಯ ತಂತ್ರಜ್ಞಾನ ದಿನ ನಿಮಿತ್ತ ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯ ಏರ್ಪಡಿಸಿದ್ದ ‘ಟೆಕ್ಕೋಮೀಟ್ ಫಾರ್ ಸೊಸೈಟಿ- 2024’ ತಂತ್ರಜ್ಞಾನ ಆವಿಷ್ಕಾರ ಮತ್ತು ಪ್ರಾತ್ಯಕ್ಷಿಕೆ ಪ್ರದರ್ಶನದಲ್ಲಿ ಸೌರಶಕ್ತಿ ಚಾಲಿತ ರೊಬೊಟ್ ಸೇರಿ ವಿವಿಧ ಸಾಧನಗಳು ಗಮನಸೆಳೆದವು.
ಶನಿವಾರ ನಡೆದ ಈ ಪ್ರದರ್ಶನಕ್ಕೆ ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಸಂಜಯ್ ಜೈನ್ ಹಾಗೂ ಉಪಪ್ರಾಂಶುಪಾಲ ಬಿ.ನರಸಿಂಹ ಮೂರ್ತಿ ಚಾಲನೆ ನೀಡಿದರು. ವಿದ್ಯಾರ್ಥಿಗಳು ಆವಿಷ್ಕರಿಸಿದ್ದ ಪ್ರಾತ್ಯಕ್ಷಿಕೆ ಎಲ್ಲರನ್ನು ಆಕರ್ಷಿಸಿತು.
ಬ್ಲೂಟೂತ್ ನಿಯಂತ್ರಿತ ರೊಬೊಟ್, ಸುಧಾರಿತ ನೀರಿನ ಶುದ್ಧೀಕರಣ ಸಾಧನ, ರೇಷ್ಮೆ ಉಪಕರಣ ಸಾಧನ, ಭ್ರೂಣದ ಚಲನೆ ಗುರುತಿಸುವ ತಂತ್ರಾಂಶ ಸಾಧನ, ಮೊಬೈಲ್ ಆಟಗಳಲ್ಲಿ ದೈಹಿಕ ಚಟುವಟಿಕೆ ಸಕ್ರಿಯಗೊಳಿಸುವ ತಂತ್ರಾಂಶ, ದೂಳಿನ ಕಣಗಳನ್ನು ಗಾಳಿಯಲ್ಲಿ ಶುದ್ಧೀಕರಿಸುವ ಸಾಧನ, ವಾಹನ ಚಾಲನೆ ಸಮಯದಲ್ಲಿ ಅರೆನಿದ್ರಾವಸ್ಥೆ ಪತ್ತೆಕಾರಕ ಸಾಧನ ಸೇರಿ ವಿವಿಧ ಆವಿಷ್ಕಾರ ಸಾಧನಗಳಿದ್ದವು.
ಎಐ ಆ್ಯಂಡ್ ಎಂಎಲ್ ವಿದ್ಯಾರ್ಥಿಗಳಾದ ಕೀರ್ತಿ ಮತ್ತು ತಂಡ ಆವಿಷ್ಕರಿಸಿದ್ದ ಅರೆನಿದ್ರಾವಸ್ಥೆ ಪತ್ತೆಕಾರಕ ಸಾಧನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇಸಿಇ ವಿದ್ಯಾರ್ಥಿಗಳು ಆವಿಷ್ಕರಿಸಿದ ಧ್ವನಿ ಆಪರೇಟರ್ ಸ್ಮಾರ್ಟ್ ಕನ್ನಡಿ ಸಾಧನವು ಹವಾಮಾನ ಮುನ್ಸೂಚನೆ, ದಿನಾಂಕ, ವಾರ, ದಿನದ ಪ್ರಚಲಿತ ಸುದ್ದಿಗಳನ್ನು ನೀಡಲಿದೆ.
ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿ ಮಾತನಾಡಿದ ಸಿಎಂಆರ್ ವಿಶ್ವವಿದ್ಯಾಲಯದ ಅಧ್ಯಕ್ಷ ಕೆ.ಸಿ ರಾಮಮೂರ್ತಿ, ‘ತಂತ್ರಜ್ಞಾನದ ಈ ಯುಗದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲಿನ ಅವಲಂಬನೆ ಹೆಚ್ಚಿದೆ. ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರುವ ತಂತ್ರಜ್ಞಾನ ಆವಿಷ್ಕಾರಗಳು ಭವಿಷ್ಯದ ವಿಜ್ಞಾನಿಗಳನ್ನಾಗಿ ರೂಪಿಸುವ ದಿಕ್ಸೂಚಿಯಾಗಿವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.