
ಬೆಂಗಳೂರು: ನಾಲ್ಕು ಕಾರ್ಮಿಕ ಕೋಡ್‌ಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು. ವಿ.ಬಿ. ಜಿರಾಮ್ ಜಿ, ವಿಮಾ ತಿದ್ದುಪಡಿ ಕಾಯ್ದೆ, ಶಾಂತಿ ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಫೆ.12ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಮ್ಮಿಕೊಳ್ಳಲಾಗಿದೆ.
ಟ್ರೇಡ್ ಯುನಿಯನ್ ಜಂಟಿ ಸಮಿತಿ (ಜೆಸಿಟಿಯು)- ಸಂಯುಕ್ತ ಹೋರಾಟ ಕರ್ನಾಟಕ (ಎಸ್‌ಎಚ್‌ಕೆ) ವತಿಯಿಂದ ಬುಧವಾರ ಇಲ್ಲಿ ನಡೆದ ರಾಜ್ಯ ಸಮಾವೇಶದಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ.
ಸುಲಲಿತ ವ್ಯಾಪಾರದ ಹೆಸರಲ್ಲಿ ಯೂನಿಯನ್ ಮುಕ್ತ ವಾತಾವರಣವನ್ನು ಕಲ್ಪಿಸಲು ಕೇಂದ್ರ ಸರ್ಕಾರವು ಸರ್ವಾಧಿಕಾರಿ ವರ್ತನೆ ತೋರುತ್ತಿದೆ. ನಾಲ್ಕು ಕಾರ್ಮಿಕ ಕಾಯ್ದೆಗಳ ಮೂಲಕ ಹೊಸ ಶ್ರಮಿಕ ನೀತಿ ಜಾರಿ ಮಾಡಲು ಯತ್ನಿಸುತ್ತಿದೆ. ಶ್ರಮಿಕ ನೀತಿಯು ಮನುಸ್ಮೃತಿಯಿಂದ ಸ್ಫೂರ್ತಿ ಪಡೆದು ದುಡಿಮೆಗಾರನ ಕೆಲಸ ದುಡಿಯುವುದು ಮಾತ್ರ ಎಂಬ ಪರಿಕಲ್ಪನೆಯನ್ನು ಹೊಂದಿದೆ ಎಂದು ಸಿಐಟಿಯು ಅಧ್ಯಕ್ಷೆ ಎಸ್. ವರಲಕ್ಷ್ಮೀ ಮಂಡಿಸಿದ ಕರಡು ನಿರ್ಣಯದಲ್ಲಿ ತಿಳಿಸಲಾಗಿದೆ.
ಕನಿಷ್ಠ ವೇತನಕ್ಕಿಂತ ಕಡಿಮೆ ಇರಬಾರದು ಎಂದಿದ್ದರೂ ಕಾರ್ಮಿಕ ಸಂಹಿತೆಯಲ್ಲಿ ದಿನಕ್ಕೆ ₹178 ನಿಗದಿ ಮಾಡಲಾಗಿದೆ. ಈಗಾಗಲೇ ಮಾಲೀಕರು ಗಳಿಸುವ ಲಾಭವು ಶೇ 51ರವರೆಗೆ ಹೆಚ್ಚಳವಾಗಿದೆ. ಇದೇ ಸಂದರ್ಭದಲ್ಲಿ ಕಾರ್ಮಿಕರ ವೇತನದ ಪಾಲು ಶೇ 15.97ಕ್ಕೆ ಇಳಿದಿದೆ. ಹೊಸ ಕಾರ್ಮಿಕ ನೀತಿಯು ವೇತನದ ಪಾಲನ್ನು ಇನ್ನಷ್ಟು ಕಡಿಮೆ ಮಾಡಲಿದೆ ಎಂದು ನಿರ್ಣಯದಲ್ಲಿ ಎಚ್ಚರಿಸಲಾಯಿತು.
ಅಸಂಘಟಿತ ಕಾರ್ಮಿಕರಿಗೆ ಇಎಸ್‌ಐ, ಇಪಿಎಫ್ ಇಲ್ಲ. ₹18 ಸಾವಿರಕ್ಕಿಂತ ಕಡಿಮೆ ವೇತನವಿದ್ದರೆ ಅವರಿಗೆ ಯಾವುದೇ ಸೌಲಭ್ಯ ದೊರೆಯುವುದಿಲ್ಲ. ಕಾಯಂ ನೌಕರರ ಪರಿಕಲ್ಪನೆಯನ್ನು ತೆಗೆದು ಹಾಕಲಾಗಿದೆ. ಕೈಗಾರಿಕಾ ಸಂಹಿತೆಯಲ್ಲಿ ಕಾರ್ಮಿಕರ ಪ್ರಾಥಮಿಕ ಸಂಘಗಳ ರಚನೆ, ನೋಂದಣಿಯಾದ ಸಂಘಗಳ ನಿರ್ವಹಣೆಯನ್ನು ಕಠಿಣಗೊಳಿಸಲಾಗಿದೆ ಎಂದು ಮಾಹಿತಿ ನೀಡಲಾಯಿತು.
ದಿನಕ್ಕೆ 12 ತಾಸು ಕೆಲಸ ಮಾಡಬೇಕು ಎಂದು ತಿಳಿಸಲಾಗಿದೆ. ಆದರೆ, ಹೆಚ್ಚುವರಿ ಸಮಯದ ವೇತನದ ಬಗ್ಗೆ ಪ್ರಸ್ತಾಪವಿಲ್ಲ. ನರೇಗಾ ಕಾಯ್ದೆಯನ್ನು ವಿಕಸಿತ್ ಭಾರತ್ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ ಕಾಯ್ದೆ ಎಂದು ಬದಲಾಯಿಸಲಾಗಿದೆ. ಹೊಸ ಕಾಯ್ದೆಯಲ್ಲಿ ಉದ್ಯೋಗದ ಹಕ್ಕನ್ನು ಕಿತ್ತುಕೊಳ್ಳಲಾಗಿದೆ.
ಭಾರತವನ್ನು ಪರಿವರ್ತಿಸಲು ಪರಮಾಣು ಶಕ್ತಿಯ ಸುಸ್ಥಿರ ಬಳಕೆ ಹಾಗೂ ಪ್ರಗತಿ (ಶಾಂತಿ) ಕಾಯ್ದೆಯನ್ನು ಖಾಸಗಿ ಮತ್ತು ವಿದೇಶಿ ಬಂಡವಾಳಗಾರರ ಲಾಭಕ್ಕಾಗಿ ಮಾಡಲಾಗಿದೆ. ಇದು ಅಪಾಯಕಾರಿಯಾಗಿದೆ. ಬೀಜ ಮಸೂದೆ, ವಿದ್ಯುತ್ ಕಾಯ್ದೆ ತಿದ್ದುಪಡಿ ಮಸೂದೆಗಳು ಜನವಿರೋಧಿಯಾಗಿವೆ. ಇವುಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಮುಷ್ಕರ ನಡೆಸಲಾಗುತ್ತಿದೆ. ಈ ಮುಷ್ಕರವನ್ನು ರಾಜ್ಯದಲ್ಲಿ ಯಶಸ್ವಿಗೊಳಿಸಲು ನಿರ್ಣಯ ಕೈಗೊಳ್ಳಲಾಯಿತು.
ಜೆಸಿಟಿಯು, ಇಂಟಕ್, ಎಐಟಿಯುಸಿ, ಸಿಐಟಿಯು, ಎಚ್‌ಎಂಎಸ್, ಎಐಯುಟಿಯುಸಿ, ಟಿಯುಸಿಸಿ, ಎಐಸಿಸಿತಿಯು, ಎಚ್‌ಎಂಕೆಪಿ, ಕೆಡಬ್ಲ್ಯುಯು, ಕೆಐಇಇಎಫ್, ಎನ್‌ಸಿಎಲ್, ಬ್ಯಾಂಕ್, ವಿಮೆ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರಾದ ನಾಗನಾಥ, ಸೋಮಶೇಖರ್, ನಿರ್ಮಲಾ, ದೀಪಕ್, ಮಹಾಂತೇಶ್, ಎಂಝಡ್ ಅಲಿ, ಲೀಲಾವತಿ, ಬಡಗಲಪುರ ನಾಗೇಂದ್ರ, ಯಶವಂತ, ಮೀನಾಕ್ಷಿ ಸುಂದರಂ, ಲಕ್ಷ್ಮೀ ವೆಂಕಟೇಶ್, ಕಾಳಪ್ಪ, ಕ್ರಿಪ್ಟನ್ ರೊಸಾರಿಯೊ, ನೂರ್ ಶ್ರೀಧರ್, ಸಿದ್ದನಗೌಡ ಪಾಟೀಲ, ಕೆ.ವಿ. ಭಟ್ ಸಹಿತ ಅನೇಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.