
ಬೆಂಗಳೂರು: ಮಾದಕ ವಸ್ತು ಕಳ್ಳ ಸಾಗಣೆ ನಿಯಂತ್ರಣ ದಳದ (ಎನ್‌ಸಿಬಿ) ಬೆಂಗಳೂರು ವಲಯದ ಅಧಿಕಾರಿಗಳು 2025ರಲ್ಲಿ ಡ್ರಗ್ಸ್ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.
ಒಂದು ವರ್ಷದಲ್ಲಿ ₹270 ಕೋಟಿ ಮೌಲ್ಯದ ವಿವಿಧ ಮಾದರಿಯ ಡ್ರಗ್ಸ್ ಜಪ್ತಿ ಮಾಡಿಕೊಂಡು, ಏಳು ಮಂದಿ ವಿದೇಶಿ ಪೆಡ್ಲರ್‌ಗಳೂ ಸೇರಿದಂತೆ ಒಟ್ಟು 81 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
490 ಕೆ.ಜಿ ಗಾಂಜಾ, 244 ಕೆ.ಜಿ ಹೈಡ್ರೊಗಾಂಜಾ ಸೇರಿದಂತೆ ಎಲ್‌ಎಸ್‌ಡಿ, ಎಂಡಿಎಂಎ, ಕೊಕೇನ್ ಜಪ್ತಿ ಮಾಡಿಕೊಳ್ಳಲಾಗಿತ್ತು ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಮಾದಕ ವಸ್ತು ಜಾಲವನ್ನು ಪತ್ತೆಹಚ್ಚಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಸೂಚಿಸಿತ್ತು. ಅದರಂತೆ ಎನ್‌ಸಿಬಿ ಬೆಂಗಳೂರು ವಲಯದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಕಳೆದ ವರ್ಷ 30 ಪ್ರಕರಣ ದಾಖಲಿಸಿದ್ದರು.
‘ಐದು ಪ್ರಕರಣಗಳಲ್ಲಿ ಡ್ರಗ್ಸ್ ಜಾಲವನ್ನು ಪತ್ತೆಹಚ್ಚಿ ಸೂತ್ರಧಾರರನ್ನು ಬಂಧಿಸಲಾಗಿದೆ. ಥಾಯ್ಲೆಂಡ್, ಬ್ಯಾಂಕಾಕ್‌ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಹೈಡ್ರೊಗಾಂಜಾವನ್ನು ನಗರಕ್ಕೆ ತರಲಾಗುತ್ತಿತ್ತು. ಪೆಡ್ಲರ್‌ಗಳು, ಖರೀದಿದಾರರು, ಮಧ್ಯವರ್ತಿಗಳನ್ನು ಬಂಧಿಸಲಾಗಿದೆ’ ಎಂದು ಎನ್‌ಸಿಬಿ ಅಧಿಕಾರಿಗಳು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.