ನೆಲಮಂಗಲ: ‘ಆರೋಗ್ಯ ಕ್ಷೇತ್ರದಲ್ಲೂ ತಂತ್ರಜ್ಞಾನದ ಅಳವಡಿಕೆ ವ್ಯಾಪಕವಾಗುತ್ತಿದ್ದು, ನವ ಪದವೀಧರರು ಕಾಲದ ಅಗತ್ಯಕ್ಕೆ ತಕ್ಕಂತೆ ಕೌಶಲಗಳನ್ನು ವೃದ್ಧಿಸಿಕೊಳ್ಳಬೇಕು’ ಎಂದು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಸಿ.ಭಗವಾನ್ ಸಲಹೆ ನೀಡಿದರು.
ಹರ್ಷ ಹಾಗೂ ವಿಕ್ಟರಿ ನರ್ಸಿಂಗ್ ಕಾಲೇಜು, ಹರ್ಷ ಫಾರ್ಮಸಿ, ಅಲೈಡ್ ಹೆಲ್ತ್ ಸೈನ್ಸ್, ಫಿಸಿಯೊಥೆರಪಿ ಕಾಲೇಜುಗಳು ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿ ಅವರು ಮಾತನಾಡಿದರು.
‘ಆರೋಗ್ಯ ಸೇವೆ ಒದಗಿಸುವ ಶಿಕ್ಷಣ ಪಡೆದವರಿಗೆ ಜಗತ್ತಿನಾದ್ಯಂತ ಬೇಡಿಕೆ ಹೆಚ್ಚಿದೆ. ಹಾಗಾಗಿ ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ರೋಗಿಗಳೊಂದಿಗೆ ಸಂಯಮದಿಂದ ವರ್ತಿಸಬೇಕು’ ಎಂದು ಕಿವಿಮಾತು ಹೇಳಿದರು.
ರಾಜ್ಯ ಔಷಧ ವಿಜ್ಞಾನ ಪರಿಷತ್‌ನ ರಿಜಿಸ್ಟ್ರಾರ್ ಡಾ.ಸಿರ್ಸೆ ಕ್ರಾಂತಿಕುಮಾರ್ ‘ಪದವಿ ಪಡೆದವರು ನಮ್ಮ ಪರಿಷತ್ತಿನಲ್ಲಿ ನೋಂದಣಿ ಮಾಡಿಸಬೇಕು. ಈಗ ನೋಂದಣಿಯನ್ನು ಸಂಪೂರ್ಣ ಆನ್‌ಲೈನ್ ಮಾಡಲಾಗಿದೆ. ಯಾರೂ ಕಚೇರಿಗೆ ಸುತ್ತಾಡಬೇಕಿಲ್ಲ’ಎಂದರು.
ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಪಿ.ಮಹೇಶ್, ‘ಎಲ್ಲ ಕ್ಷೇತ್ರಗಳಲ್ಲೂ ಕೃತಕ ಬುದ್ಧಿಮತ್ತೆ(ಎಐ) ತಂತ್ರಜ್ಞಾನ ಆವರಿಸುತ್ತಿದ್ದು, ನಿರುದ್ಯೋಗ ಸೃಷ್ಟಿಯ ಲಕ್ಷಣಗಳು ಗೋಚರಿಸುತ್ತಿವೆ. ಆದರೆ ನರ್ಸಿಂಗ್ ಕ್ಷೇತ್ರಕ್ಕೆ ಸದ್ಯಕ್ಕೆ ಎಐ ಬರಲು ಸಾಧ್ಯವಿಲ್ಲ. 20 ವರ್ಷ ಕಳೆದ ಮೇಲೆ ಬರಬಹುದು. ಹೀಗಾಗಿ ನರ್ಸಿಂಗ್ ಕಲಿತವರಿಗೆ ನಿರುದ್ಯೋಗ ಸಮಸ್ಯೆ ಕಾಡುವುದಿಲ್ಲ’ ಎಂದರು.
ಹರ್ಷ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಸ್.ಶಿವಕುಮಾರ್, ಉಪಾಧ್ಯಕ್ಷೆ ಗಿರಿಜಾ, ಕಾರ್ಯದರ್ಶಿಗಳಾದ ಹರ್ಷ, ಯಶಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.