ADVERTISEMENT

ನೆಲಮಂಗಲ | ಗ್ರಂಥಪಾಲಕ ಆತ್ಮಹತ್ಯೆ: ಕಳಲುಘಟ್ಟ ಪಿಡಿಒ ಗೀತಾಮಣಿ ಅಮಾನತು

ಸಂಬಳ ಪಾವತಿಸದೆ ಕರ್ತವ್ಯ ಲೋಪ, ಗೀತಾಮಣಿ ವಿರುದ್ಧ ದಾಖಲಾಗಿದ್ದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 14:44 IST
Last Updated 30 ಅಕ್ಟೋಬರ್ 2025, 14:44 IST
ಗೀತಾಮಣಿ
ಗೀತಾಮಣಿ   

ದಾಬಸ್‌ಪೇಟೆ/ನೆಲಮಂಗಲ: ತಾಲ್ಲೂಕಿನ ಕಳಲುಘಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೀತಾಮಣಿ ಅವರನ್ನು ಅಮಾನತು ಮಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ಎಸ್‌.ಅನುರಾಧ ಅವರು ಆದೇಶ ಹೊರಡಿಸಿದ್ದಾರೆ.

ಇದೇ ಪಂಚಾಯಿತಿಯ ಗ್ರಂಥಾಲಯದ ಗ್ರಂಥಪಾಲಕರಾಗಿ 25 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಗೋವೇನಹಳ್ಳಿಯ ರಾಮಚಂದ್ರಯ್ಯ ಅವರು ಅ.27ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.

‘ರಾಮಚಂದ್ರಯ್ಯ ಅವರ ಸಾವಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗೀತಾಮಣಿ ಕಾರಣ. ಸುಮಾರು ಮೂರು ತಿಂಗಳಿಂದ ಸಂಬಳ ಪಾವತಿಸಿಲ್ಲ. ಹಾಜರಾತಿ ನಮೂದಿಸಲು ಬಯೊಮೆಟ್ರಿಕ್ ಕೊಡದೇ ಕಿರುಕುಳ ನೀಡಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಮೃತರ ಸಹೋದರನ ಪುತ್ರ ಕಾಂತರಾಜು ಪೊಲೀಸರಿಗೆ ದೂರು ನೀಡಿದ್ದರು.

ADVERTISEMENT

ಆ ದೂರು ಆಧರಿಸಿ ಪಿಡಿಒ ಗೀತಾಮಣಿ (ಆರೋಪಿ–1) ವಿರುದ್ಧ ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.

‘ಪಂಚಾಯಿತಿ ಸಿಬ್ಬಂದಿಯ ಅಸ್ವಾಭಾವಿಕ ಸಾವಿನ ಘಟನೆ ನಡೆದು 24 ಗಂಟೆ ಕಳೆದರೂ ಸಹ ಪಿಡಿಒ ಸಂಪರ್ಕಕ್ಕೆ ಸಿಕ್ಕಿಲ್ಲ. ಘಟನೆಯ ಬಗ್ಗೆ ಮೇಲಿನ ಅಧಿಕಾರಿಗಳಿಗೂ ಮಾಹಿತಿ ನೀಡಿಲ್ಲ. ರಾಮಚಂದ್ರಯ್ಯ ಅವರಿಗೆ ಜೂನ್‌ವರೆಗೆ ಮಾತ್ರ ಸಂಬಳ ಪಾವತಿಸಲಾಗಿದೆ. ಜುಲೈ ಹಾಗೂ ಆಗಸ್ಟ್‌ ತಿಂಗಳ ವೇತನವನ್ನು ಪಾವತಿಸದೇ ಇರುವುದು ಕಂಡುಬಂದಿದೆ. ಸಿಬ್ಬಂದಿಗೆ ಸಕಾಲದಲ್ಲಿ ವೇತನ ಪಾವತಿಸುವುದು ಕರ್ತವ್ಯ. ಸಕಾಲದಲ್ಲಿ ಸಿಬ್ಬಂದಿಗೆ ವೇತನ ಪಾವತಿಸದೇ ಪಿಡಿಒ ಗೀತಾಮಣಿ ಅವರು ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.