ADVERTISEMENT

ನೆಲಮಂಗಲ: ನವೆಂಬರ್‌ನಲ್ಲಿ ಅಧಿಕ ಮಳೆ

ರಾಜಧಾನಿ ಮಗ್ಗುಲಲ್ಲಿರುವ ನೆಲಮಂಗಲ ತಾಲ್ಲೂಕಿನ ಜನಜೀವನ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2021, 19:18 IST
Last Updated 23 ನವೆಂಬರ್ 2021, 19:18 IST
ಗೋ ಕಟ್ಟೆ ತುಂಬಿರುವುದು
ಗೋ ಕಟ್ಟೆ ತುಂಬಿರುವುದು   

ದಾಬಸ್ ಪೇಟೆ: ವಾಯುಭಾರ ಕುಸಿತದ ಪರಿಣಾಮದಿಂದ ಸುರಿಯುತ್ತಿರುವ ಮಳೆಗೆ ರಾಜಧಾನಿ ಮಗ್ಗುಲಲ್ಲಿರುವ ನೆಲಮಂಗಲ ತಾಲ್ಲೂಕಿನ ಜನಜೀವನ ಅಸ್ತವ್ಯಸ್ತವಾಗಿದೆ. ವಾಡಿಕೆಗಿಂತ ಮೀರಿ ಮಳೆ ಸುರಿದಿದೆ. ನವೆಂಬರ್ ಒಂದೇ ತಿಂಗಳಲ್ಲಿ 132.17 ಮಿ.ಮೀ ಮಳೆ ಬಂದಿದೆ.

ನೆಲಮಂಗಲ ತಾಲ್ಲೂಕಿನಲ್ಲಿ ಜನವರಿ 1ರಿಂದ ನವೆಂಬರ್ 22ರವರೆಗೆ ಹವಾಮಾನ ಅಂಕಿ-ಅಂಶದ ಪ್ರಕಾರ 930 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, 1,191 ಮಿ. ಮೀ. ಮಳೆಯಾಗುವ ಮೂಲಕ ಶೇಕಡ 28 ರಷ್ಟು ಹೆಚ್ಚುವರಿ ಮಳೆಯಾಗಿದೆ.

ಕಳೆದ ಸಾಲಿನಲ್ಲಿ ಜನವರಿ 1ರಿಂದ ನವೆಂಬರ್ ವರೆಗೆ 1,007.62 ಮಿ.ಮೀ. ಮಳೆಯಾಗಿತ್ತು. ಅದರಲ್ಲಿ ನವೆಂಬರ್ ತಿಂಗಳು ಒಂದರಲ್ಲಿ 22 ಮಿ.ಮೀ. ಮಳೆಯಾಗಿತ್ತು. ಈ ವರ್ಷ ನವೆಂಬರ್ ತಿಂಗಳು ಒಂದರಲ್ಲೇ (22ರವರೆಗೆ) 132.17 ಮಿ.ಮೀ. ಮಳೆ ಆಗಿದೆ. ಕಳೆದ ಬಾರಿಗಿಂತ 110 ಮಿ.ಮೀ. ಅಧಿಕ ಮಳೆಯಾಗಿದೆ.

ADVERTISEMENT

ಮನೆ ಹಾನಿ: ನೆಲಮಂಗಲ ತಾಲ್ಲೂಕಿನ ಕಸಬಾ, ಸೋಂಪುರ ಹಾಗೂ ತ್ಯಾಮಗೊಂಡ್ಲು ಗ್ರಾಮಗಳ ವ್ಯಾಪ್ತಿಯ ಹಲವು ಹಳ್ಳಿಗಳಲ್ಲಿ ಜಂತೆ ಮನೆಗಳು, ಶೀಟಿನ ಮನೆಗಳು ಹೆಚ್ಚಿನ ಪ್ರಮಾಣದಲ್ಲಿವೆ. ಬಿಡದೆ ಸುರಿದ ಮಳೆಯಿಂದ ಗೋಡೆಗಳು ನೆನೆದು ಸಾಕಷ್ಟು ಮನೆಗಳು ಕುಸಿದಿವೆ. ಆರ್‌ಸಿಸಿ ಕಟ್ಟಡಗಳೇ ಸೋರುತ್ತಿವೆ. ಇನ್ನೂ ಕೆಲ ತಗ್ಗುಪ್ರದೇಶದ ಮನೆಗಳು ಜಲಾವೃತವಾಗಿವೆ. ತಗ್ಗು ಪ್ರದೇಶಗಳ ಕೃಷಿ ಭೂಮಿಯಲ್ಲಿ ನೀರು ನಿಂತು ಜಲಾನಯನ ಪ್ರದೇಶಗಳ ಮಾದರಿ ಗೋಚರಿಸುತ್ತಿದೆ. ಇಟ್ಟಿದ್ದ ಬೆಳೆಗಳು ನೀರು ಪಾಲಾಗಿವೆ.

ತುಂಬಿ ಹರಿದ ಕೆರೆ ಕಟ್ಟೆಗಳು: ಕೋಡಿ ಭಾಗ್ಯವನ್ನೇ ಕಾಣದ, ದಶಕದಿಂದ ಖಾಲಿಯಾಗಿ ಬಿದ್ದಿದ್ದ, ತಾಲ್ಲೂಕಿನ ಸಾಕಷ್ಟು ಕೆರೆಗಳು ಹೆಚ್ಚಿನ ಮಳೆಯಿಂದ ಕೋಡಿ ಆಗಿವೆ. ಅವುಗಳ ಜೊತೆಗೆ ಕಲ್ಯಾಣಿ, ಗೋಕಟ್ಟೆಗಳು ತುಂಬಿ ತುಳುಕುತ್ತಿವೆ.

ಮೇವಿಗೆ ತಾತ್ವಾರ: ರೈತರು ಸಂಗ್ರಹಿಸಿದ್ದ ಹುಲ್ಲಿನ ಮೆದೆಗಳು ಟಾರ್‌ಪಾಲ್ ಹಾಕಿ ಮುಚ್ಚಿಕೊಂಡರೂ ಶೀತ ಗಾಳಿ ರಭಸಕ್ಕೆ ಮೆತ್ತಗಾಗಿ ಜಾನುವಾರುಗಳ ಮೇವಿಗೂ ಅಡಚಣೆಯುಂಟಾಗುತ್ತಿದೆ. ಅಕಾಲಿಕ ಮಳೆ ಪರಿಣಾಮ ತಾಲ್ಲೂಕಿನ ಶೇ 80ಕ್ಕೂ ಅಧಿಕ ರಾಗಿ ಬೆಳೆ ನೆಲ ಕಚ್ಚಿದೆ. ಒಂದಷ್ಟು ಹಾಳಾಗಿದೆ. ಹುಲ್ಲು ಕೊಳೆತು ಹೆಚ್ಚಿನ ಹುಲ್ಲು ಸಂಗ್ರಹ ಆಗಿಲ್ಲ. ಇದರಿಂದ ಹೈನುಗಾರಿಕೆಗೆ ಹೊಡೆತ ಬೀಳಲಿದೆ.

ಟೊಮೆಟೋ, ಹುರುಳಿಕಾಯಿ, ತೊಗರಿ, ಅಲಸಂಡೆ, ಹುರುಳಿ, ಅವರೆ ಮುಂತಾದ ಬೆಳೆ ನೆಲಕಚ್ಚಿದ್ದು, ತರಕಾರಿ ಬೆಳೆಗಾರರಿಗೂ ಹೊಡೆತ ಬಿದ್ದಿದೆ. ಇದರಿಂದ ಬೆಲೆ ಏರಿಕೆಯ ಹೆಚ್ಚಾಗಿ, ಗ್ರಾಹಕರ ತರಕಾರಿ ಕೊಳ್ಳುವಿಕೆಗೂ ಕಷ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.