ADVERTISEMENT

ನೇತಾಜಿಯ ಮೂರು ಕೃತಿಗಳ ಜನಾರ್ಪಣೆ ನಾಳೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2025, 23:50 IST
Last Updated 28 ಆಗಸ್ಟ್ 2025, 23:50 IST
<div class="paragraphs"><p>ಸಾದರ ಸ್ವೀಕಾರ</p></div>

ಸಾದರ ಸ್ವೀಕಾರ

   

ಬೆಂಗಳೂರು: ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರು ಬರೆದ ಎರಡು ಕೃತಿಗಳು ಮತ್ತು ಅವರ ಆಜಾದ್‌ ಸೇನೆಯ ಯೋಧೆಯಾಗಿದ್ದ– ತಮ್ಮ ಹೆಸರು ಪ್ರಕಟಿಸಲು ಇಚ್ಛಿಸದ– ‘ಶ್ರೀಮತಿ ಎಂ...’ ಎಂಬವರು ನೇತಾಜಿ ಬಗೆಗೆ ಪ್ರಕಟಿಸಿದ ಒಂದು ಕೃತಿಯ ಕನ್ನಡ ಅನುವಾದ ಆ.30ರಂದು ಮಧ್ಯಾಹ್ನ 3.30ಕ್ಕೆ ಪುರಭವನದಲ್ಲಿ ಜನಾರ್ಪಣೆಗೊಳ್ಳಲಿವೆ.

ಕೆ.ಈ. ರಾಧಾಕೃಷ್ಣ ಅವರು ಮೂರೂ ಕೃತಿಗಳನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ‘ಒಂದು ಅಪೂರ್ಣ ಆತ್ಮಕತೆ’, ‘ಭಾರತೀಯ ಹೋರಾಟ’ ಹಾಗೂ ‘ಅಸಾಮಾನ್ಯ ದಿನಚರಿ’ ಕೃತಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಜನಾರ್ಪಣೆ ಮಾಡಲಿದ್ದಾರೆ ಎಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಟ್ರಸ್ಟ್ ಅಧ್ಯಕ್ಷ ಎಂ. ರಾಜಕುಮಾರ್ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ದೇಶದ ಸ್ವಾತಂತ್ರ‍್ಯಕ್ಕಾಗಿ ಮಡಿದ ನೇತಾಜಿ ಕುರಿತು ಹಲವು ವಾಸ್ತವ ಸಂಗತಿಗಳನ್ನು ಮರೆಮಾಚಲಾಗಿದೆ. 1935ರಲ್ಲಿ ಪ್ರಕಟವಾದ ನೇತಾಜಿ ಅವರ ‘ದಿ ಇಂಡಿಯನ್ ಸ್ಟ್ರಗಲ್’ ಪುಸ್ತಕವು 1920-1934ರ ನಡುವಿನ ಭಾರತದ ಸ್ವಾತಂತ್ರ‍್ಯ ಹೋರಾಟದ ಕಥೆ ಬಿಚ್ಚಿಟ್ಟಿದೆ. ನೇತಾಜಿ ಅವರ ‘ಒಂದು ಅಪೂರ್ಣ ಆತ್ಮಕಥೆ’ ಹಾಗೂ ಯೋಧೆ ದಾಖಲಿಸಿದ ‘ಅಸಾಮಾನ್ಯ ದಿನಚರಿ’ ಪುಸ್ತಕಗಳು ವಾಸ್ತವದ ಇತಿಹಾಸ ತಿಳಿಸಿವೆ? ಎಂದು ವಿವರಿಸಿದರು.

ಅನುವಾದಕ ಕೆ.ಈ. ರಾಧಾಕೃಷ್ಣ ಮಾತನಾಡಿ, ‘ಮಹಾತ್ಮ ಗಾಂಧಿ ಮತ್ತು ನೇತಾಜಿ ನಡುವೆ ಕಲಹವಿತ್ತು ಎಂಬ ಊಹಾಪೋಹದ ಚರಿತ್ರೆ ಸೃಷ್ಟಿಸಲಾಗಿದೆ. ಅಹಿಂಸಾತ್ಮಕ ಹೋರಾಟದಲ್ಲಿ ತೊಡಗಿದ್ದ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ ಅವರೊಂದಿಗೆ ನೇತಾಜಿ ಭಾವೋದ್ವೇಗ ಹಾಗೂ ದ್ವೇಷವಿಲ್ಲದ ಭಿನ್ನಾಭಿಪ್ರಾಯ ಹೊಂದಿದ್ದರು. ಇಬ್ಬರ ವಾದ ಬೇರೆಯಾಗಿದ್ದರೂ ಗುರಿ ಮತ್ತು ದಾರಿ ಒಂದೇ ಆಗಿತ್ತು. ಇತಿಹಾಸದ ಈ ವಾಸ್ತವದ ಮೇಲೆ ಮೂರು ಪುಸ್ತಕಗಳು ಬೆಳಕು ಚೆಲ್ಲಿವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.