ADVERTISEMENT

ಹೊಸ ಪೊಲೀಸ್ ಠಾಣೆ ‘ಗೋವಿಂದರಾಜನಗರ’

ನಗರದ 111ನೇ ಕಾನೂನು ಸುವ್ಯವಸ್ಥೆ ಠಾಣೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2021, 22:06 IST
Last Updated 1 ಸೆಪ್ಟೆಂಬರ್ 2021, 22:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜಧಾನಿಯ ಪೊಲೀಸ್ ಠಾಣೆಗಳ ಪಟ್ಟಿಗೆ ‘ಗೋವಿಂದರಾಜನಗರ’ ಠಾಣೆ ಸೇರ್ಪಡೆಗೊಂಡಿದೆ. ಹೊಸ ಠಾಣೆ ಆರಂಭಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು, ಇದೇ 12ರಂದು ಠಾಣೆಯ ಕಟ್ಟಡ ಉದ್ಘಾಟನೆ ಆಗಲಿದೆ. ಇದು ನಗರದ 111ನೇ ಕಾನೂನು ಸುವ್ಯವಸ್ಥೆ ಪೊಲೀಸ್ ಠಾಣೆ.

ಪಶ್ಚಿಮ ವಿಭಾಗದ ವಿಜಯನಗರ ಠಾಣೆ ವ್ಯಾಪ್ತಿಯಲ್ಲಿದ್ದ ಗೋವಿಂದರಾಜನಗರಕ್ಕೆ ಪ್ರತ್ಯೇಕ ಠಾಣೆ ಅಗತ್ಯವಿರುವುದಾಗಿ ವಸತಿ ಸಚಿವ ವಿ. ಸೋಮಣ್ಣ ಮನವಿ ಸಲ್ಲಿಸಿದ್ದರು. ಅದನ್ನು ಪರಿಗಣಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಸರ್ಕಾರಕ್ಕೆ ಇತ್ತೀಚೆಗೆ ಪ್ರಸ್ತಾವ ಸಲ್ಲಿಸಿದರು. ಇದನ್ನು ಪರಿಶೀಲಿಸಿರುವ ಸರ್ಕಾರ, ಹೊಸ ಠಾಣೆ ತೆರೆಯಲು ಅನುಮತಿ ನೀಡಿ ಮಂಗಳವಾರ ಆದೇಶ ಹೊರಡಿಸಿದೆ.

‘ಗೋವಿಂದರಾಜನಗರ ಕ್ಷೇತ್ರದ ಸರಸ್ವತಿನಗರದಲ್ಲಿರುವ ಬಿಬಿಎಂಪಿ ಹೊಸ ಕಟ್ಟಡದಲ್ಲಿ ಠಾಣೆ ಆರಂಭವಾಗಲಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅಥವಾ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕಟ್ಟಡ ಉದ್ಘಾಟಿಸುವ ಸಾಧ್ಯತೆ ಇದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

₹ 5.58 ಕೋಟಿ ಅಂದಾಜು ವೆಚ್ಚ: ‘ವಿಜಯನಗರ ಠಾಣೆಯನ್ನು ವಿಭಜಿಸಿ ಗೋವಿಂದರಾಜನಗರ ಠಾಣೆ ತೆರೆದು ಕಾರ್ಯನಿರ್ವಹಿಸಲು ವಾರ್ಷಿಕ ₹ 5.58 ಕೋಟಿ ವೆಚ್ಚ ಆಗಲಿದೆ’ ಎಂದು ಪ್ರವೀಣ್ ಸೂದ್ ಪ್ರಸ್ತಾವದಲ್ಲಿ ತಿಳಿಸಿದ್ದರು.

‘ವಿಜಯನಗರ ಠಾಣೆಯು 7 ಕಿ.ಮೀ ಸುತ್ತಳತೆ ಪ್ರದೇಶಗಳ ವ್ಯಾಪ್ತಿ ಹೊಂದಿದೆ. ವಿಜಯನಗರ, ಹೊಸಹಳ್ಳಿ, ಹಂಪಿನಗರ, ಅತ್ತಿಗುಪ್ಪೆ, ಕಾವೇರಿಪುರ, ಗೋವಿಂದರಾಜನಗರ, ಅಗ್ರಹಾರ ದಾಸರಹಳ್ಳಿ, ಮಾರೇನಹಳ್ಳಿ, ಮಾರುತಿ ಮಂದಿರ ಹಾಗೂ ಮೂಡಲಪಾಳ್ಯ ಪ್ರದೇಶಗಳು ಈ ಠಾಣೆ ವ್ಯಾಪ್ತಿಯಲ್ಲಿವೆ. ಸರ ಕಳವು, ಸುಲಿಗೆ, ಮನೆಗಳಲ್ಲಿ ಕಳ್ಳತನ, ವಾಹನ ಕಳವು ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ’.

‘ಠಾಣೆ ರೌಡಿ ಪಟ್ಟಿಯಲ್ಲಿ 93 ಮಂದಿ ಹೆಸರಿದೆ. ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪಟ್ಟೆಗಾರಪಾಳ್ಯದಲ್ಲಿ ಹೆಚ್ಚು ಗಲಾಟೆ ಆಗಿತ್ತು. ಈ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು, ವಿಜಯನಗರ ಠಾಣೆ ವಿಭಜಿಸಿ ಗೋವಿಂದರಾಜನಗರ ಹೊಸ ಠಾಣೆ ತೆರೆಯುವ ಅಗತ್ಯವಿದೆ. ಇದಕ್ಕೆ ಅನುಮತಿ ನೀಡಿ, ಇನ್‌ಸ್ಪೆಕ್ಟರ್, 8 ಪಿಎಸ್ಐ, 15 ಎಎಸ್‌ಐ, 30 ಹೆಡ್ ಕಾನ್‌ಸ್ಟೆಬಲ್, 60 ಕಾನ್‌ಸ್ಟೆಬಲ್‌ ಹುದ್ದೆಗಳನ್ನು ಮಂಜೂರು ಮಾಡಬೇಕು’ ಎಂದೂ ಪ್ರಸ್ತಾವದಲ್ಲಿ ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.