ADVERTISEMENT

ಅಬಕಾರಿ ಇಲಾಖೆಯಲ್ಲಿ ವರ್ಗಾವಣೆಗೆ ಹೊಸ ನಿಯಮ: ಸಚಿವ ಆರ್.ಬಿ.ತಿಮ್ಮಾಪೂರ

​ಪ್ರಜಾವಾಣಿ ವಾರ್ತೆ
Published 17 ಜನವರಿ 2025, 11:56 IST
Last Updated 17 ಜನವರಿ 2025, 11:56 IST
<div class="paragraphs"><p>ಆರ್.ಬಿ.ತಿಮ್ಮಾಪೂರ</p></div>

ಆರ್.ಬಿ.ತಿಮ್ಮಾಪೂರ

   Banu prakash

ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಸುಧಾರಣೆ ಹಾಗೂ ಪಾರದರ್ಶಕತೆ ತರಬೇಕಾಗಿರುವ ಕಾರಣ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಇಲಾಖೆಯಲ್ಲಿನ ವರ್ಗಾವಣೆಗೆ ಹೊಸ ನಿಯಮಗಳನ್ನು ರೂಪಿಸಲಾಗಿದೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ತಿಳಿಸಿದ್ದಾರೆ.

ಅಬಕಾರಿ‌ ಇಲಾಖೆಯ ವರ್ಗಾವಣೆ ನಿಯಮಗಳನ್ನು ಮಾರ್ಪಾಡು ಮಾಡುವ ಮೂಲಕ ಪಾರದರ್ಶಕ ಮತ್ತು ನಿಯಮಾಧಾರಿತ ವರ್ಗಾವಣೆ ಪದ್ದತಿಯನ್ನು ಜಾರಿಗೊಳಿಸುವುದರಿಂದ ,ಇತರೆ ಪ್ರಭಾವಗಳಿಗೆ ಒಳಗಾಗುವುದನ್ನು ತಡೆಗಟ್ಟಲು ಸಾಧ್ಯ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

ADVERTISEMENT

ಇದಕ್ಕಾಗಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರಡು ನಿಯಮಾವಳಿಗೆ ಒಪ್ಪಿಗೆ ನೀಡಲಾಗಿದೆ. ಈ ಕರಡು ನಿಯಮಾವಳಿ ಪ್ರಕಟಿಸಿ, ಸಂಬಂಧಪಟ್ಟವರಿಂದ ಆಕ್ಷೇಪಣೆ ಅಥವಾ ಸಲಹೆಗಳನ್ನು ಆಹ್ವಾನಿಸಲಾಗುವುದು ಎಂದು ಹೇಳಿದ್ದಾರೆ.

ಅಬಕಾರಿ ಇಲಾಖೆಯಲ್ಲಿನ ಹುದ್ದೆಗಳನ್ನು ಕಾರ್ಯ ನಿರ್ವಾಹಕ ಮತ್ತು ಕಾರ್ಯ ನಿರ್ವಾಹಕೇತರ ಎಂದು ವಿಂಗಡಿಸಿ, ಅಬಕಾರಿ ನಿರೀಕ್ಷಕರು, ಅಬಕಾರಿ ಉಪನಿರೀಕ್ಷಕರು, ಅಬಕಾರಿ ಮುಖ್ಯಪೇದೆ ಮತ್ತು ಅಬಕಾರಿ ಪೇದೆಗಳ ವರ್ಗಾವಣೆಯನ್ನು ಕೌನ್ಸೆಲಿಂಗ್ ಮೂಲಕ ಮಾಡಲು ನಿರ್ಧರಿಸಲಾಗಿದೆ. ಅಲ್ಲದೇ, ಒಬ್ಬ ಅಧಿಕಾರಿ ಅಥವಾ ಸಿಬ್ಬಂದಿಯನ್ನು ಸತತವಾಗಿ ಎರಡಕ್ಕಿಂತ ಹೆಚ್ಚು ಅವಧಿಗೆ ಕಾರ್ಯ ನಿರ್ವಾಹಕ ಹುದ್ದೆಗೆ ವರ್ಗಾಯಿಸುವಂತಿಲ್ಲ. ಅಧಿಕಾರಿಗಳನ್ನು ಕಡ್ಡಾಯವಾಗಿ ವರ್ಗಾವಣೆ ಮಾಡಲಾಗುವುದು ಎಂದಿದ್ದಾರೆ.

ಕಳೆದ 5 ವರ್ಷಗಳಲ್ಲಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿನ ಕಾರ್ಯನಿರ್ವಾಹಕ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದ ಅಬಕಾರಿ ಜಂಟಿ ಆಯುಕ್ತರು, ಉಪ ಆಯುಕ್ತರು, ಅಧೀಕ್ಷಕರು, ನಿರೀಕ್ಷಕರು ಮತ್ತು ಉಪ ನಿರೀಕ್ಷಕರುಗಳನ್ನು ಆಯಾ ಜಿಲ್ಲೆಗಳನ್ನು ಹೊರತು ಪಡಿಸಿ ಇತರೆ ಜಿಲ್ಲೆಗಳಿಗೆ ವರ್ಗಾಯಿಸಲು ಹೊಸ ನಿಯಮದಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದ್ದಾರೆ.

ಇವೆಲ್ಲದರ ಪರಿಣಾಮ ಸರ್ಕಾರಕ್ಕೆ ಆದಾಯ ಹೆಚ್ಚಾಗುವುದರ ಜತೆಗೆ ಭ್ರಷ್ಟಾಚಾರಕ್ಕೂ ಆಸ್ಪದ ಸಿಗುವುದಿಲ್ಲ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.