ಬಿಬಿಎಂಪಿ ಇ–ಖಾತಾ
ಬೆಂಗಳೂರು: ಬಿಬಿಎಂಪಿಯಲ್ಲಿರುವ ಆಸ್ತಿಗಳಿಗೆ ಖಾತಾ ಹೊಂದಿರದ ಮಾಲೀಕರ ಅನುಕೂಲಕ್ಕಾಗಿ ಹೊಸ ವೆಬ್‌ಸೈಟ್ (https://BBMP.karnataka.gov.in/NewKhata) ಆರಂಭಿಸಲಾಗಿದೆ.
ನಗರದಲ್ಲಿ ಐದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಆಸ್ತಿ ಮಾಲೀಕರು ಬಿಬಿಎಂಪಿಯಿಂದ ಖಾತಾ ಹೊಂದಿಲ್ಲ. ಕೈಬರಹದ ಖಾತಾವನ್ನೂ ಹೊಂದಿರುವುದಿಲ್ಲ. ಖಾತಾ ಇಲ್ಲದೆಯೇ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಈ ಸ್ವತ್ತುಗಳಿಗೆ ಸಂಬಂಧಿಸಿದ ವಹಿವಾಟು ನಡೆಸುತ್ತಿದ್ದು, ಆಸ್ತಿ ತೆರಿಗೆ ವ್ಯಾಪ್ತಿಯಿಂದಲೂ ಹೊರಗುಳಿದಿವೆ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸುದ್ದಿಗಾರರಿಗೆ ಸೋಮವಾರ ತಿಳಿಸಿದರು.
ಎಲ್ಲ ಆಸ್ತಿಗಳಿಗೂ ಖಾತಾ ನೀಡಬೇಕು. ಎಲ್ಲವನ್ನೂ ತೆರಿಗೆ ವ್ಯಾಪ್ತಿಗೆ ತರಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೂಚಿಸಿದ್ದಾರೆ. ಅದರಂತೆ ಬಿಬಿಎಂಪಿ ಕ್ರಮ ಕೈಗೊಳ್ಳುತ್ತಿದೆ ಎಂದರು.
ಮಾಲೀಕರು ಹೊಸದಾಗಿ ಖಾತಾ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಆಧಾರ್ ಸಂಖ್ಯೆ, ಮಾರಾಟ/ನೋಂದಣಿ ಪತ್ರದ ಸಂಖ್ಯೆ, ಆಸ್ತಿ ಚಿತ್ರ, ಮಾರಾಟ/ ನೋಂದಣಿ ಪತ್ರಕ್ಕೆ ಕನಿಷ್ಠ ಒಂದು ದಿನ ಮೊದಲಿನಿಂದ ಆಸ್ತಿಯ 2024ರ ಅಕ್ಟೋಬರ್ 31ರವರೆಗಿನ ಅವಧಿಯ ಋಣಭಾರ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಹೊಸದಾಗಿ ಖಾತಾವನ್ನು ಪಡೆಯುವ ಪ್ರಕ್ರಿಯೆ ಕುರಿತು ಬಿಬಿಎಂಪಿ ವಿಡಿಯೊ (https://youtu.be/FRLimLizeHM?si=BxG9mgRWBU7RkP3B) ಮೂಲಕ ವಿವರಣೆ ನೀಡಿದೆ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಮಾಹಿತಿ ನೀಡಿದರು.
ಬಿಬಿಎಂಪಿಯಿಂದ ಕೈಬರಹ ಅಥವಾ ಇ– ಖಾತಾ ಹೊಂದಿದ್ದರೆ ಮತ್ತೆ ಹೊಸ ಖಾತಾ ಪಡೆಯಲು ಪ್ರಯತ್ನಿಸಬಾರದು. ಇಂತಹ ಪ್ರಯತ್ನಕ್ಕೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಅನಧಿಕೃತ ಜಾಹೀರಾತು: ಎಫ್‌ಐಆರ್ ದಾಖಲಿಸಲು ಸೂಚನೆ
ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತು ಅಳವಡಿಸಿರುವವರ ವಿರುದ್ಧ ಎಫ್‌ಐಆರ್ ದಾಖಲಿಸಲು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
‘ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲಿಯೂ ಅನಧಿಕೃತ ಜಾಹೀರಾತು ಇರದಂತೆ ನೋಡಿಕೊಳ್ಳಬೇಕು. ವಲಯಗಳಲ್ಲಿ ಜಾಹೀರಾತುಗಳನ್ನು ತೆರವುಗೊಳಿಸಿ, ಅದನ್ನು ಅಳವಡಿಸಿರುವವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ಮತ್ತೆ ಯಾವುದೇ ರೀತಿಯ ಅನಧಿಕೃತ ಜಾಹೀರಾತುಗಳನ್ನು ಅಳವಡಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸೋಮವಾರ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಬ್ಯಾಂಕ್‌ಗಳಿಗಾಗಿ ‘ಸರ್ಫೇಸಿ ಕಾಯ್ದೆ’
ಆಸ್ತಿ ವಹಿವಾಟುಗಳಿಗೆ ಇ–ಖಾತಾ ಕಡ್ಡಾಯಗೊಳಿಸಿರುವುದರಿಂದ, ಭದ್ರತೆ, ಪುನರ್‌ನಿರ್ಮಾಣ, ಭದ್ರತೆ ಬಡ್ಡಿ ಜಾರಿ ಕಾಯ್ದೆ 2002 (ಸರ್ಫೇಸಿ ಕಾಯ್ದೆ) ನಿಬಂಧನೆಗಳ ಅಡಿ ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು ಆಸ್ತಿಗಳ ಮಾರಾಟ ಪ್ರಮಾಣ ಪತ್ರ ನೋಂದಾಯಿಸಲು ಅನುವಾಗುವಂತೆ, ಬಿಬಿಎಂಪಿ ಇ–ಖಾತಾ ವಿಧಾನವನ್ನು ರಚಿಸಿದೆ.
ಒಂದು ಸ್ವತ್ತನ್ನು ಅಡಮಾನವಿಟ್ಟು ಪಡೆದ ಸಾಲವನ್ನು ಮರು ಪಾವತಿ ಮಾಡಲು ವಿಫಲವಾದಾಗ, ಬ್ಯಾಂಕ್‌ಗಳು ಮಾರಾಟ ಪ್ರಮಾಣದ ಮೂಲಕ ಮಾರಾಟವನ್ನು ಕಾರ್ಯಗತಗೊಳಿಸುತ್ತವೆ. ಎಲ್ಲ ನೋಂದಣಿಗೂ ಇ–ಖಾತಾ ಕಡ್ಡಾಯವಾಗಿರುವುದರಿಂದ ಕೆಲವು ಬಾರಿ ಖಾತಾದಾರ ಸಹಕರಿಸದಿರ
ಬಹುದು. ಆದ್ದರಿಂದ ಹಣಕಾಸು ಸಂಸ್ಥೆಗಳಿಗೆ ಅನುಕೂಲವಾಗಲು ಇ–ಖಾತಾ ಪ್ರಕ್ರಿಯೆಯಲ್ಲಿ ಅವರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.