ADVERTISEMENT

ಹೊಸ ವರ್ಷ: ಜವಾಬ್ದಾರಿಯುತವಾಗಿ ಆಚರಿಸಿ– ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ಅಭಿಯಾನ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 23:46 IST
Last Updated 22 ಡಿಸೆಂಬರ್ 2025, 23:46 IST
ಸೀಮಂತ್‌ ಕುಮಾರ್ ಸಿಂಗ್‌ 
ಸೀಮಂತ್‌ ಕುಮಾರ್ ಸಿಂಗ್‌    

ಬೆಂಗಳೂರು: ಹೊಸ ವರ್ಷದ ಆಚರಣೆ ವೇಳೆ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಕ್ರಮ ಕೈಗೊಂಡಿರುವ ನಗರ ಪೊಲೀಸರು,  ‘ಜವಾಬ್ದಾರಿಯುತವಾಗಿ ಆಚರಿಸಿ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ.

ನಗರ ಪೊಲೀಸ್ ಕಮಿಷನರ್‌ ಸೀಮಾಂತ್ ಕುಮಾರ್ ಸಿಂಗ್ ಅಭಿಯಾನಕ್ಕೆ ಚಾಲನೆ ನೀಡಿ, ಕರ್ತವ್ಯ ನಿರತ ಪೊಲೀಸ್ ಅಧಿಕಾರಿ-ಸಿಬ್ಬಂದಿ ನೀಡುವ ಮಾರ್ಗಸೂಚಿ, ಸಲಹೆ-ಸೂಚನೆಗಳನ್ನು ಪಾಲಿಸಬೇಕು. ಪ್ರತಿಯೊಬ್ಬರೂ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು. ಡ್ರಗ್ಸ್‌ ಪಾರ್ಟಿ, ರೇವ್ ಪಾರ್ಟಿಗೆ ಅವಕಾಶ ಇಲ್ಲ ಎಂದು ಹೇಳಿದರು.

ಜನದಟ್ಟಣೆ ಉಂಟಾದಾಗ ಮೀಸಲಿಟ್ಟ ಸ್ಥಳದಲ್ಲಿ ಸಾರ್ವಜನಿಕರು ಆಶ್ರಯ ಪಡೆಯಬಹುದು. ಬಿಎಂಟಿಸಿ, ಮೆಟ್ರೊ, ಅಗ್ನಿಶಾಮಕ ಇಲಾಖೆ ಸೇರಿ ಸಂಬಂಧಪಟ್ಟ ಇಲಾಖೆಗಳ ಜತೆ ಚರ್ಚೆ ನಡೆಸಲಾಗಿದೆ. ಪಬ್, ರೆಸ್ಟೋರೆಂಟ್‌ಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ADVERTISEMENT

ಮಹಿಳೆ ಮತ್ತು ಮಕ್ಕಳ ಸುರಕ್ಷತೆ ಪ್ರಮುಖ ಆದ್ಯತೆಯಾಗಿದ್ದು, ಜನದಟ್ಟಣೆ ಪ್ರದೇಶದಲ್ಲಿ ತಕ್ಷಣ ಸಹಾಯಬೇಕಾದರೆ, ಕೆಎಸ್‌ಪಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು, ಎಸ್‌ಒಎಸ್‌ ಫೀಚರ್‌ ಬಳಸಬೇಕು. ಮಹಿಳೆಯರ ಸುರಕ್ಷತೆಗಾಗಿ ರಾಣಿ ಚೆನ್ನಮ್ಮ ಪಡೆ ನಿಯೋಜಿಸಲಾಗಿದೆ. ಹೊಯ್ಸಳ, ಚೀತಾ ವಾಹನಗಳ ಗಸ್ತು ಹೆಚ್ಚಳ ಮಾಡಲಾಗಿದೆ ಎಂದು ವಿವರಿಸಿದರು.

ದೂರು ನೀಡಲು ಕ್ಯೂ ಆರ್ ಕೋಡ್‌: 

ಪ್ರಯಾಣಿಕರ ಸುರಕ್ಷತೆಗಾಗಿ ಹೊಸ ವ್ಯವಸ್ಥೆಯನ್ನು ಪೊಲೀಸರು ಪರಿಚಯಿಸಿದ್ದಾರೆ. ತುರ್ತು ಸಂದರ್ಭದಲ್ಲಿ ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ಮಾಡುವ ಮೂಲಕ ನಗರ ಪೊಲೀಸರ ಹಲವು ಲಿಂಕ್‌ಗಳನ್ನು ಪಡೆಯಬಹುದು. ಹೊಸ ವರ್ಷದ ಆಚರಣೆಗಳಿಗೆ ಸಂಬಂಧಿಸಿದ ವ್ಯವಸ್ಥೆ, ಸಲಹೆ ಮತ್ತು ಸೂಚನೆಗಳ ಕುರಿತು ಅಪ್‌ಡೇಟ್‌ ಸಿಗಲಿದೆ. ಬಸ್, ರೈಲು, ಮೆಟ್ರೊ ನಿಲ್ದಾಣ ಹಾಗೂ ಇತರೆ ಸ್ಥಳಗಳಲ್ಲಿ ಈ ಕ್ಯೂಆರ್‌ ಕೋಡ್‌ ಅಳವಡಿಸಲಾಗುತ್ತದೆ.

ಕ್ಯೂ ಆರ್ 

ಪೊಲೀಸರು ಕೈಗೊಂಡಿರುವ ಕ್ರಮಗಳು

*ಸಾರ್ವಜನಿಕರು ಮನೆಗಳಿಗೆ ತೆರಳಲು ನಮ್ಮ ಮೆಟ್ರೊ ಅವಧಿ ವಿಸ್ತರಿಸಲಾಗಿದೆ. ಬಸ್‌, ಆಟೊ ರಿಕ್ಷಾ, ಕ್ಯಾಬ್‌ಗಳ ಸಂಖ್ಯೆಗಳನ್ನು ಹೆಚ್ಚಿಸಲಾಗಿದೆ.

*ಮಾದಕ ವಸ್ತುಗಳ ಮಾರಾಟ, ಸೇವನೆ ನಿಷೇಧಿಸಿದ್ದು, ನಿಯಮ ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುತ್ತದೆ.

*ಮದ್ಯ ಕುಡಿದು ವಾಹನ ಚಾಲನೆ ಮಾಡಬಾರದು. ಒಂದು ವೇಳೆ ಮದ್ಯ ಕುಡಿದರೆ ಕ್ಯಾಬ್ ಅಥವಾ ಸಾರ್ವಜನಿಕ ಸೇವೆ ವ್ಯವಸ್ಥೆ ಮಾಡಿಕೊಳ್ಳಬೇಕು.

* ತುರ್ತು ಸಂದರ್ಭದಲ್ಲಿ 112ಕ್ಕೆ ಕರೆ ಮಾಡಬಹುದು. ಕೇವಲ 8-10 ನಿಮಿಷದಲ್ಲಿ ಹೊಯ್ಸಳ ವಾಹನ ಸಿಬ್ಬಂದಿ ಸ್ಥಳಕ್ಕೆ ಬರಲಿದ್ದಾರೆ.

*ಹೆಚ್ಚು ಜನಸಂದಣಿ ಇರುವ ಸ್ಥಳದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಹಾಗೂ ಕೃತಕ ಬುದ್ದಿಮತ್ತೆ (ಎ.ಐ) ತಂತ್ರಜ್ಞಾನ ಆಧಾರಿತ ಕ್ಯಾಮೆರಾಗಳ ಬಳಸಿ ನಿಗಾವಹಿಸಲಾಗುತ್ತದೆ.

ಕ್ಯಾಬ್ ಪ್ರಯಾಣಿಕರ ಸುರಕ್ಷತೆಗೆ ಕ್ರಮ ಕ್ಯಾಬ್‌ ಪ್ರಯಾಣಿಕರ ಸುರಕ್ಷತೆಗೆ ಕ್ರಮ ಕೈಗೊಂಡಿರುವ ನಗರ ಪೊಲೀಸರು ಓಲಾ ಮತ್ತು ಉಬರ್ ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ. ಕ್ಯಾಬ್‌ ಬುಕ್ಕಿಂಗ್‌ಗೆ ಬಳಸುವ ಮೊಬೈಲ್ ಆ್ಯಪ್‌ನಲ್ಲಿ ತುರ್ತು ಕರೆ ಸೌಲಭ್ಯ ಒದಗಿಸಲಾಗಿದೆ. ತುರ್ತು ಸಂದರ್ಭದಲ್ಲಿ ಪ್ರಯಾಣಿಕರು ಮತ್ತು ಚಾಲಕರು ತಾವು ಇರುವ ಸ್ಥಳ ಪ್ರಯಾಣದ ವಿವರ ಕುರಿತ ಮಾಹಿತಿಯನ್ನು 112ಕ್ಕೆ ಕರೆ ಮಾಡಿ ಹಂಚಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಕಮಾಂಡ್ ಸೆಂಟರ್‌ಗೆ ಮಾಹಿತಿ ತಲುಪಿದ ಕೂಡಲೇ ಸಮೀಪದ ಹೊಯ್ಸಳ ವಾಹನಕ್ಕೆ ಮಾಹಿತಿ ತಲುಪಿ ತಕ್ಷಣವೇ ನಿಗದಿತ ಸ್ಥಳಕ್ಕೆ ತೆರಳಲಿದೆ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.