ಬೆಂಗಳೂರು: ಜಮಾತ್–ಉಲ್–ಮುಜಾಹಿದ್ದೀನ್ ಬಾಂಗ್ಲಾದೇಶ(ಜೆಎಂಬಿ) ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಉಗ್ರ ಜೈದುಲ್ಲಾ ಇಸ್ಲಾಂ ಅಲಿಯಾಸ್ ಕೌಸರ್‌ಗೆ ರಾಷ್ಟ್ರೀಯ ತನಿಖಾ ದಳದ(ಎನ್‌ಐಎ) ಪ್ರಕರಣಗಳ ವಿಶೇಷ ನ್ಯಾಯಾಲಯ ಏಳು ವರ್ಷ ಕಠಿಣ ಶಿಕ್ಷೆ ಹಾಗೂ ₹57 ಸಾವಿರ ದಂಡ ವಿಧಿಸಿದೆ.
ಅಕ್ರಮವಾಗಿ ರಾಜ್ಯದಲ್ಲಿ ವಾಸವಿದ್ದ ಕೌಸರ್, ತನ್ನ ಸಂಘಟನೆಗೆ ಹಣ ಕಳುಹಿಸಲು ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಡಕಾಯಿತಿ ನಡೆಸುತ್ತಿದ್ದ. ರಾಮನಗರದಲ್ಲಿ ಈತನನ್ನು ಬಂಧಿಸಲಾಗಿತ್ತು. ತನಿಖೆ ನಡೆಸಿದ್ದ ಎನ್ಐಎ ಅಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಬಾಂಗ್ಲಾದೇಶದಲ್ಲಿ 2005ರಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದಲ್ಲೂ ಕೌಸರ್‌ನನ್ನು ಬಂಧಿಸಲಾಗಿತ್ತು. ನಂತರ ಬಿಡುಗಡೆಯಾಗಿದ್ದ ಕೌಸರ್, 2014ರಲ್ಲಿ ಸಂಘಟನೆಯ ಮುಖ್ಯಸ್ಥ ಸಲಾವುದ್ದೀನ್ ಸಲೇಹಿನ್ ಜತೆ ಸೇರಿ ಭಾರತ ಪ್ರವೇಶಿಸಿದ್ದ. ಬಳಿಕ ತಮ್ಮ ತಂಡಗಳನ್ನು ಪ್ರತ್ಯೇಕಗೊಳಿಸಿ ದಕ್ಷಿಣ ರಾಜ್ಯಗಳ ಕಡೆ ಕಳುಹಿಸಿದ್ದ.
ಕೌಸರ್ ತನ್ನ ಸಹಚರರ ಜತೆ ಸೇರಿಕೊಂಡು ಬೆಂಗಳೂರು ನಗರ, ಗ್ರಾಮಾಂತರ ಭಾಗದಲ್ಲಿ ದರೋಡೆ, ಡಕಾಯಿತಿ ನಡೆಸುತ್ತಿದ್ದ. ಬಂದ ಹಣವನ್ನು ವಿವಿಧ ಖಾತೆಗಳ ಮೂಲಕ ಸಂಘಟನೆಯ ಖಾತೆಗೆ ವರ್ಗಾವಣೆ ಮಾಡುತ್ತಿದ್ದ. ಈ ಸಂಬಂಧ ಉಗ್ರನ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿದ್ದವು. ಸಂಘಟನೆ ಬಲಪಡಿಸುವುದರ ಜತೆಗೆ ಶಸ್ತ್ರಾಸ್ತ್ರಗಳ ಸಂಗ್ರಹ, ಸಂಘಟನೆಗೆ ಸೇರಿದ ಯುವಕರಿಗೆ ತರಬೇತಿಗೆ ಹಣ ವ್ಯಯಿಸುವ ಕೆಲಸವನ್ನೂ ಮಾಡುತ್ತಿದ್ದ ಎಂದು ಎನ್‌ಐಎ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.