
ಬೆಂಗಳೂರು: ಬೆಂಗಳೂರು–ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ರಿಟ್ ಅರ್ಜಿ ಹಾಕಿರುವ ನೈಸ್ ಕಂಪನಿಯ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಿಲುವನ್ನು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸ್ವಾಗತಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಈ ಇಳಿ ವಯಸ್ಸಿನಲ್ಲಿ ನನ್ನನ್ನು ಪ್ರತಿವಾದಿಯಾಗಿಸಿ ಅರ್ಜಿ ಹಾಕಿರುವುದು ಎಷ್ಟು ಸರಿ ಎಂದು ನಾನು ಪ್ರಶ್ನಿಸಿದ್ದೆ. ಡಿ.ಕೆ.ಶಿಕುಮಾರ್ ಸಹ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಅವರು ಆ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಾರೆಯೇ ಎಂಬುದನ್ನು ನೋಡಬೇಕು’ ಎಂದರು.
‘ಈ ಯೋಜನೆ ಬಗ್ಗೆ ಮುಖ್ಯಮಂತ್ರಿ ಅವರಿಗೆ ಈ ಹಿಂದೆಯೇ ಪತ್ರ ಬರೆದಿದ್ದೆ. ಎಷ್ಟು ಭೂಮಿ ತೆಗೆದುಕೊಂಡಿದ್ದಾರೆ ಮತ್ತು ಎಷ್ಟು ಬಳಕೆ ಮಾಡಿಕೊಂಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ನೀಡಿ ಎಂದು ಕೋರಿದ್ದೆ. ಈ ವಿಚಾರದಲ್ಲಿ ಅಶೋಕ್ ಖೇಣಿ ವಿರುದ್ಧ ಸರ್ಕಾರವು ಕ್ರಮ ತೆಗೆದುಕೊಂಡರೆ ಸಂತೋಷ’ ಎಂದರು.
ಈ ಸಂಬಂಧ ಸ್ಪಷ್ಟನೆ ನೀಡಿರುವ ನೈಸ್ ಸಂಸ್ಥೆ, ‘ದೇವೇಗೌಡ ಅವರ ಹೇಳಿಕೆ ವಾಸ್ತವಕ್ಕೆ ವಿರುದ್ಧವಾಗಿದೆ. ನೈಸ್ ಸಂಸ್ಥೆಯು ಸರ್ಕಾರ ಹಾಗೂ ರೈತರ ವಿರುದ್ಧ ಯಾವುದೇ ಹೊಸ ಕ್ರಮ ತೆಗೆದುಕೊಂಡಿಲ್ಲ’ ಎಂದು ಹೇಳಿದೆ. ನ್ಯಾಯಾಲಯದ ನಿರ್ದೇಶನದ ಮೇಲೆಯೇ ಮುಂದಿನ ಹೆಜ್ಜೆ ಇಡಲಾಗುತ್ತಿದೆ ಎಂದು ತಿಳಿಸಿದೆ.
ನ್ಯಾಯಾಂಗದ ನಿರ್ದೇಶನಗಳಿಗೆ ಅನುಗುಣವಾಗಿ ಬಿಎಂಐಸಿ ಯೋಜನೆಯನ್ನು ಕಾರ್ಯಗತಗೊಳಿಸಲು ತಾನು ಬದ್ಧವಾಗಿರುವುದಾಗಿ ಕಂಪನಿಯು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.