ADVERTISEMENT

ಪೊಲೀಸರ ಮೇಲೆ ನೈಜಿರಿಯಾ ಪ್ರಜೆಗಳ ದಾಳಿ: ನಾಲ್ವರು ಅಧಿಕಾರಿಗಳಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2024, 16:05 IST
Last Updated 19 ಏಪ್ರಿಲ್ 2024, 16:05 IST
ಪೊಲೀಸರ ಜೊತೆಗೆ ವಾಗ್ವಾದ ನಡೆಸಿದ ನೈಜಿರಿಯಾ ಪ್ರಜೆಗಳು.
ಪೊಲೀಸರ ಜೊತೆಗೆ ವಾಗ್ವಾದ ನಡೆಸಿದ ನೈಜಿರಿಯಾ ಪ್ರಜೆಗಳು.   

ಬೆಂಗಳೂರು: ಬಂಧನ ಕಾರ್ಯಾಚರಣೆಗೆ ತೆರಳಿದ್ದ ಸಿಸಿಬಿ ಪೊಲೀಸರು ಹಾಗೂ ಹೊಯ್ಸಳ ಸಿಬ್ಬಂದಿ ಮೇಲೆ ನೈಜಿರಿಯಾ ಪ್ರಜೆಗಳು ಮಾರಕಾಸ್ತ್ರ, ದೊಣ್ಣೆ ಹಾಗೂ ಕಲ್ಲಿನಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದು ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ.

ರಾಜಾನುಕುಂಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ಮಾವಳ್ಳಿಪುರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ನೈಜಿರಿಯಾ ಪ್ರಜೆಗಳು, ಡ್ರಗ್ಸ್ ಪೆಡ್ಲಿಂಗ್ ಮಾಡುತ್ತಿದ್ದಾರೆ ಎಂಬ ಆರೋಪದ ಮೇರೆಗೆ ಅವರ ಬಂಧನಕ್ಕೆ ಸಿಸಿಬಿ ತಂಡ ತೆರಳಿತ್ತು.

ಆಗ ಪೊಲೀಸರ ಮೇಲೆ ದಾಳಿ ನಡೆದಿದ್ದು ಸಿಸಿಬಿ ಇನ್‌ಸ್ಪೆಕ್ಟರ್‌ ಸುಬ್ರಹ್ಮಣ್ಯ ಸ್ವಾಮಿ, ರಾಜೀವ್‌ ಸೇರಿದಂತೆ ನಾಲ್ವರು ಪೊಲೀಸ್‌ ಸಿಬ್ಬಂದಿ ಗಾಯಗೊಂಡಿದ್ದಾರೆ.

ADVERTISEMENT

ಗಾಯಗೊಂಡ ಅಧಿಕಾರಿಗಳು ನಗರದ ಆಸ್ಟರ್‌ ಸಿಎಂಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ನಡೆಸಿರುವ ದೃಶ್ಯವು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸ್ ವಾಹನದ ಮೇಲೂ ಕಲ್ಲು ತೂರಾಟ ಮಾಡಲಾಗಿದ್ದು ಗಾಜು ಪುಡಿಯಾಗಿದೆ.

‘ಬಾಗಲಗುಂಟೆ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಒಬ್ಬ ವಿದೇಶಿ ಪ್ರಜೆಯನ್ನು ಬಂಧಿಸಿ, 4 ಕೆ.ಜಿ ತೂಕದ ಮಾದಕ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿತ್ತು. ಆತ ನೀಡಿದ ಮಾಹಿತಿ ಮೇರೆಗೆ ಪ್ರಕೃತಿ ಲೇಔಟ್‌ನ ಮನೆಯಲ್ಲಿ ನೆಲೆಸಿದ್ದವರ ಬಂಧನಕ್ಕೆ ತೆರಳಿದ್ದೆವು. ಸಿಂಗನಾಯನಹಳ್ಳಿ ಬಳಿಯ ಭಗಿನಿ ರೆಸ್ಟೋರೆಂಟ್‌ನಲ್ಲಿ ಆರೋಪಿಯಿದ್ದ. ಆತ ಅಲ್ಲಿಂದ ಹೊರಟ ನಂತರ ಆತನನ್ನೇ ಹಿಂಬಾಲಿಸಿ ಮಾವಳ್ಳಿಪುರಕ್ಕೆ ತೆರಳಿದ್ದೆವು. ಅಲ್ಲಿ ಆತನನ್ನು ವಶಕ್ಕೆ ಪಡೆಯಲು ಮುಂದಾದ ವೇಳೆ ವಿರೋಧ ವ್ಯಕ್ತಪಡಿಸಿದ’ ಎಂದು ಪೊಲೀಸರು ಹೇಳಿದರು.

‘ಸಿಸಿಬಿ ಅಧಿಕಾರಿಗಳೆಂದು ಪರಿಚಯಿಸಿಕೊಂಡೆವು. ತಕ್ಷಣವೇ ಕರೆ ಮಾಡಿ ಉಳಿದವರನ್ನು ಸ್ಥಳಕ್ಕೆ ಕರೆಸಿಕೊಂಡ. ಬೈಕ್‌ನಲ್ಲಿ ಬೇರೆ ಬೇರೆ ಕಡೆಯಿಂದ 10ಕ್ಕೂ ಹೆಚ್ಚು ಮಂದಿ ಬಂದು, ದಾಳಿ ನಡೆಸಿದರು’ ಎಂದು ಪೊಲೀಸರು ಹೇಳಿದರು.

‘ಸಿಸಿಬಿ ಪೊಲೀಸರು ಎಂದು ತಿಳಿಸಿದರೂ ಏಕಾಏಕಿ ಹಲ್ಲೆ ನಡೆಸಿದ್ದಾರೆ. ರಾತ್ರಿ 11 .30ರ ಸುಮಾರಿಗೆ ಸಿಸಿಬಿ ಪೊಲೀಸರು ಕಂಟ್ರೋಲ್ ರೂಂಗೆ ಕಾಲ್ ಮಾಡಿ ವಿಚಾರ ಮುಟ್ಟಿಸಿದ್ದರು. ವಿಚಾರ ತಿಳಿದು ರಾಜಾನುಕುಂಟೆ ಪೊಲೀಸರು ಸ್ಥಳಕ್ಕೆ ತೆರಳಿದ್ದರು. ಅವರ ಮೇಲೆಯೂ ದಾಳಿ ನಡೆಸಿದ್ದಾರೆ’ ಎಂದು ಬೆಂಗಳೂರು ಗ್ರಾಮಾಂತರದ ಎಸ್.ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.

ಪೊಲೀಸ್‌ ಜೀಪಿನ ಗಾಜು ಪುಡಿಯಾಗಿದೆ.
ನೈಜರಿಯಾ ಪ್ರಜೆಗಳ ವಶ
ಬಂಧನಕ್ಕೆ ತೆರಳಿದ್ದ ವೇಳೆ ಕಲ್ಲು ತೂರಾಟ ನಡೆಸಿದ್ದಾರೆ. ಸಿಸಿಬಿಯ ಒಬ್ಬ ಇನ್‌ಸ್ಪೆಕ್ಟರ್ ಸೇರಿ ಮೂವರಿಗೆ ಗಾಯವಾಗಿದೆ. ಪೊಲೀಸ್ ವಾಹನಕ್ಕೂ ಹಾನಿಯಾಗಿದೆ. ರಾಜಾನುಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕೆಲ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಚಾಮರಾಜಪೇಟೆಯ ಸಿಸಿಬಿ ಕಚೇರಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.  – ಬಿ.ದಯಾನಂದ್ ನಗರ ಪೊಲೀಸ್ ಕಮಿಷನರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.