ADVERTISEMENT

ಮಾದಕ ವಸ್ತುಗಳ ಮಾರಾಟ: ಸಿಸಿಬಿ ಬಲೆಗೆ ನೈಜೀರಿಯಾ ವಿದ್ಯಾರ್ಥಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2018, 10:24 IST
Last Updated 14 ಸೆಪ್ಟೆಂಬರ್ 2018, 10:24 IST

ಬೆಂಗಳೂರು: ವಿದ್ಯಾರ್ಥಿಗಳು ಹಾಗೂ ಸಾಫ್ಟ್‌ವೇರ್ ಉದ್ಯೋಗಿಗಳಿಗೆ ಮಾದಕ ವಸ್ತುಗಳನ್ನು ಮಾರುತ್ತಿದ್ದ ನೈಜೀರಿಯಾದ ಎಂಬಿಎ ವಿದ್ಯಾರ್ಥಿ ಹೆನ್ರಿ ಚಿಗಾಬೋ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದು ಸೀಗೇಹಳ್ಳಿಯ ಎಸ್‌ಇಎ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಈತ, ಕೆ.ಆರ್.ಪುರ, ಗಾರ್ಡನ್‌ ಸಿಟಿ ಕಾಲೇಜು ರಸ್ತೆ, ಟಿ.ಸಿ‍.ಪಾಳ್ಯ ಸುತ್ತಮುತ್ತ ಗಿರಾಕಿಗಳನ್ನು ಹುಡುಕಿಕೊಂಡಿದ್ದ. ವಾಟ್ಸ್‌ಆ್ಯಪ್ ಗ್ರೂಪ್ ಮಾಡಿಕೊಂಡು, ತನ್ನ ಗ್ರಾಹಕರ ಮೊಬೈಲ್ ಸಂಖ್ಯೆಗಳನ್ನು ಅದರಲ್ಲಿ ಸೇರಿಸಿದ್ದ. ಈ ಗ್ರೂಪ್‌ನಲ್ಲೇ ವ್ಯವಹಾರದ ಮಾತುಕತೆ ನಡೆಯುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಪ್ರತಿದಿನ ಮಧ್ಯಾಹ್ನ 1.30 ರಿಂದ 3 ಗಂಟೆ ನಡುವೆ ಈತ ಕೆ.ಆರ್.ಪುರದ ವೆಂಕಟೇಶ್ವರ ಓಲ್ಡ್ ಪೇಪರ್ ಮಾರ್ಟ್ ಬಳಿ ಬಂದು ಪರಿಚಿತರಿಗೆ ಕೊಕೇನ್ ಮಾರುತ್ತಾನೆ ಎಂಬ ಬಗ್ಗೆ ಭಾತ್ಮೀದಾರರಿಂದ ಮಾಹಿತಿ ಬಂತು. ಬುಧವಾರ ಮಧ್ಯಾಹ್ನ ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಆತನನ್ನು ವಶಕ್ಕೆ ಪಡೆಯಲಾಯಿತು ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಆರೋಪಿಯಿಂದ 80 ಗ್ರಾಂ ಕೊಕೇನ್, ಅದನ್ನು ಅಳೆಯಲು ಬಳಸುತ್ತಿದ್ದ ಮಾಪನ, ಸ್ಕೂಟರ್ ಸೇರಿದಂತೆ ₹ 8.5 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ‘ನನ್ನ ಗೆಳೆಯನೊಬ್ಬ ಇದೇ ಜೂನ್‌ನಲ್ಲಿ ವ್ಯಾಸಂಗ ಮುಗಿಸಿ ನೈಜೀರಿಯಾಗೆ ಮರಳಿದ. ಹೋಗುವಾಗ ಈ ಕೊಕೇನನ್ನು ನನಗೆ ಕೊಟ್ಟಿದ್ದ. ಹಣದಾಸೆಗೆ ಅದನ್ನು ಮಾರಲು ಮುಂದಾಗಿದ್ದೆ’ ಎಂದು ಹೆನ್ರಿ ಹೇಳಿಕೆ ಕೊಟ್ಟಿದ್ದಾನೆ. ಆದರೆ, ಈತ ಸುಮಾರು ಒಂದೂವರೆ ವರ್ಷದಿಂದ ಈ ದಂಧೆಯಲ್ಲಿ ತೊಡಗಿದ್ದಾನೆ ಎಂಬ ಮಾಹಿತಿ ಇದೆ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.