ADVERTISEMENT

17 ಲಕ್ಷ ಮಂದಿಗೆ ‘ಟೆಲಿ ಮನಸ್’: ನಿಮ್ಹಾನ್ಸ್‌ ಸಾಧನೆಗೆ ರಾಷ್ಟ್ರಪತಿ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2025, 16:21 IST
Last Updated 3 ಜನವರಿ 2025, 16:21 IST
ಸುವರ್ಣ ಮಹೋತ್ಸವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಜೆ.ಪಿ. ನಡ್ಡಾ ಗೌರವಿಸಿದರು. ಸಿದ್ದರಾಮಯ್ಯ ಹಾಗೂ ಡಾ. ಪ್ರತಿಮಾ ಮೂರ್ತಿ ಉಪಸ್ಥಿತರಿದ್ದರು
ಸುವರ್ಣ ಮಹೋತ್ಸವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಜೆ.ಪಿ. ನಡ್ಡಾ ಗೌರವಿಸಿದರು. ಸಿದ್ದರಾಮಯ್ಯ ಹಾಗೂ ಡಾ. ಪ್ರತಿಮಾ ಮೂರ್ತಿ ಉಪಸ್ಥಿತರಿದ್ದರು   

ಬೆಂಗಳೂರು: ‘ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ನಾಯಕನಾಗಿ ಹೊರಹೊಮ್ಮಿರುವ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್), ‘ಟೆಲಿ ಮನಸ್’ ಸಹಾಯವಾಣಿಯಡಿ ಎರಡು ವರ್ಷಗಳಲ್ಲಿಯೇ 17 ಲಕ್ಷ ಮಂದಿಗೆ ಸೇವೆ ಒದಗಿಸಿದೆ’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಶ್ಲಾಘಿಸಿದರು.

ನಿಮ್ಹಾನ್ಸ್‌ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮನೋಚಿಕಿತ್ಸಾ ವಿಶೇಷ ವಿಭಾಗ, ಕೇಂದ್ರೀಯ ಪ್ರಯೋಗಾಲಯ ಸಂಕೀರ್ಣ, ಭೀಮಾ ವಸತಿ ನಿಲಯ, 3ಟಿ ಎಂಆರ್‌ಐ ಸ್ಕ್ಯಾನರ್ ಹಾಗೂ ಡಿಎಸ್‌ಎ ಸಿಸ್ಟಮ್‌ ಉದ್ಘಾಟಿಸಿ ಅವರು ಮಾತನಾಡಿದರು. 

‘ಸಂಶೋಧನೆ ಮತ್ತು ರೋಗಿಗಳ ಆರೈಕೆಯಲ್ಲಿ ಅಸಾಧಾರಣವಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ, ಮಾನಸಿಕ ಆರೋಗ್ಯ ಸೇವೆಗೆ ತಂತ್ರಜ್ಞಾನವನ್ನೂ ಸಮರ್ಪಕವಾಗಿ ಬಳಸಿಕೊಂಡಿದೆ. ಟೆಲಿ ಮನಸ್‌ ಸೇವೆಯಿಂದ ಮಾನಸಿಕ ಅನಾರೋಗ್ಯ ಸಮಸ್ಯೆ ಇರುವವರನ್ನು ತಲುಪಲು ಸಾಧ್ಯವಾಗುತ್ತಿದೆ. ದೇಶದಾದ್ಯಂತ ಲಭ್ಯವಿರುವ ಈ ಸೇವೆಯಡಿ, ಜನರು ತಮ್ಮ ಆಯ್ಕೆಯ ಭಾಷೆಯಲ್ಲಿ ತಜ್ಞರ ಸಮಾಲೋಚನೆಗೆ ಒಳಪಡಬಹುದಾಗಿದೆ. ಮಾನಸಿಕ ಕಾಯಿಲೆಗಳ ಬಗೆಗಿನ ಕಳಂಕಗಳೂ ದೂರವಾಗಿ, ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡುತ್ತಿರುವುದು ಉತ್ತಮ ಬೆಳವಣಿಗೆ’ ಎಂದರು. 

ADVERTISEMENT

‘ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಪದವಿ ವಿದ್ಯಾರ್ಥಿಗಳಲ್ಲಿ ಶೇ 79.7ರಷ್ಟು ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಲ್ಲಿ ಶೇ 61.4ರಷ್ಟು ಮಂದಿ ಯುವತಿಯರಾಗಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚುತ್ತಿರುವುದು ಸಕಾರಾತ್ಮಕ ಬೆಳವಣಿಗೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ರೋಗಿಗಳ ಸಂಖ್ಯೆ ಹೆಚ್ಚಳ: ನಿಮ್ಹಾನ್ಸ್ ಅಧ್ಯಕ್ಷರೂ ಆಗಿರುವ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಮಾತನಾಡಿ, ‘ನಿಮ್ಹಾನ್ಸ್‌ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸುತ್ತಿರುವುದರಿಂದ ರೋಗಿಗಳ ಸಂಖ್ಯೆ ಐದು ಪಟ್ಟು ಹೆಚ್ಚಾಗಿದೆ. 1970ರ ದಶಕದಲ್ಲಿ ರೋಗಿಗಳ ಸಂಖ್ಯೆ 10 ಲಕ್ಷಕ್ಕಿಂತ ಕಡಿಮೆಯಿತ್ತು. ಕಳೆದ ದಶಕದಲ್ಲಿ ಈ ಸಂಖ್ಯೆ 50 ಲಕ್ಷಕ್ಕೂ ಹೆಚ್ಚಾಗಿದೆ. ‘ಟೆಲಿಮನಸ್’ ಮೂಲಕ ಮಾನಸಿಕ ಆರೋಗ್ಯ ಸೇವೆ ಒದಗಿಸುತ್ತಿದ್ದು, ಸಂಸ್ಥೆಯಲ್ಲಿ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಈ ಸೇವೆಗೆ ತರಬೇತಿ ನೀಡಲಾಗುತ್ತಿದೆ. ಸಂಸ್ಥೆಯು ಮುಂದಿನ 25 ವರ್ಷಗಳಿಗೆ ನೀಲನಕ್ಷೆ ರೂಪಿಸಿಕೊಳ್ಳಬೇಕು’ ಎಂದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, ಸಂಸದರಾದ ಪಿ.ಸಿ. ಮೋಹನ್, ತೇಜಸ್ವಿ ಸೂರ್ಯ, ಡಾ.ಸಿ.ಎನ್. ಮಂಜುನಾಥ್, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ ಹಾಗೂ ಸಂಸ್ಥೆ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಉಪಸ್ಥಿತರಿದ್ದರು.

ನಿಮ್ಹಾನ್ಸ್‌ಗೆ ಅಗತ್ಯ ನೆರವು: ಸಿ.ಎಂ

‘ನಿಮ್ಹಾನ್ಸ್ ಕಳೆದ ಐದು ದಶಕಗಳಲ್ಲಿ ದೇಶದ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆ ನೀಡುತ್ತಾ ಬಂದಿದ್ದು ದೇಶದ ಪ್ರಮುಖ ಸಂಸ್ಥೆಯಾಗಿ ತನ್ನ ಛಾಪು ಮೂಡಿಸಿದೆ. ಸಂಸ್ಥೆಯ ಮೂಲಸೌಕರ್ಯ ಅಭಿವೃದ್ಧಿ ಸಂಶೋಧನೆ ಹಾಗೂ ತರಬೇತಿ ಕಾರ್ಯಕ್ರಮಗಳಿಗೆ ನೆರವು ನೀಡಲು ರಾಜ್ಯ ಸರ್ಕಾರ ಬದ್ಧವಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‘ಮಾನಸಿಕ ಆರೋಗ್ಯದ ಆರೈಕೆ ಜತೆಗೆ ರೋಗದ ಕುರಿತಾಗಿ ಸಾಮಾನ್ಯವಾಗಿ ಅಂಟಿಕೊಳ್ಳುವ ಸಮಾಜದ ನಕರಾತ್ಮಕ ದೃಷ್ಟಿಕೋನವನ್ನು ನಿವಾರಿಸುವಲ್ಲಿ ನಿಮ್ಹಾನ್ಸ್ ಬಹುತೇಕ ಯಶಸ್ವಿಯಾಗಿದೆ. ರಾಜ್ಯ ಸರ್ಕಾರವು ಮಾನಸಿಕ ಆರೋಗ್ಯ ಸೇವೆ ಒದಗಿಸಲು ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ನಿಮ್ಹಾನ್ಸ್ ಸಂಸ್ಥೆಯ ಕಾರ್ಯನಿರ್ವಹಣೆಗಾಗಿ ಪ್ರತಿವರ್ಷ ₹137 ಕೋಟಿ ಒದಗಿಸುವ ಮೂಲಕ ರಾಜ್ಯ ಸರ್ಕಾರ ತನ್ನ ಬದ್ಧತೆಯನ್ನು ನಿರೂಪಿಸಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.