ADVERTISEMENT

ಆರು ಕಾರ್ಮಿಕ ಮುಖಂಡರನ್ನು ಕೆಲಸದಿಂದ ತೆಗೆದ ನಿಮ್ಹಾನ್ಸ್‌

ಚಿಕಿತ್ಸೆಯಲ್ಲಿ ತಾರತಮ್ಯ ಖಂಡಿಸಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 15:56 IST
Last Updated 20 ಜುಲೈ 2020, 15:56 IST
ನಿಮ್ಹಾನ್ಸ್‌ ಆವರಣದಲ್ಲಿ ಹೊರಗುತ್ತಿಗೆ ಸಿಬ್ಬಂದಿ ಸೋಮವಾರ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು
ನಿಮ್ಹಾನ್ಸ್‌ ಆವರಣದಲ್ಲಿ ಹೊರಗುತ್ತಿಗೆ ಸಿಬ್ಬಂದಿ ಸೋಮವಾರ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು   

ಬೆಂಗಳೂರು: ನಿಮ್ಹಾನ್ಸ್‌ನಲ್ಲಿ ಕಾಯಂ ಸಿಬ್ಬಂದಿ ಮತ್ತು ಹೊರಗುತ್ತಿಗೆ ಸಿಬ್ಬಂದಿಗೆ ಕೋವಿಡ್‌ ಚಿಕಿತ್ಸೆ ನೀಡುವಲ್ಲಿ ತಾರತಮ್ಯ ನಡೆಸಲಾಗುತ್ತಿದೆ ಎಂದು ಆರೋಪಿಸಿ ಹೊರಗುತ್ತಿಗೆ ಸಿಬ್ಬಂದಿ ಸೋಮವಾರ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಆರು ಮಂದಿ ಕಾರ್ಮಿಕರನ್ನು ಕೆಲಸದಿಂದ ತೆಗೆದಿದೆ.

‘ನಿಮ್ಹಾನ್ಸ್‌ನಲ್ಲಿ ಕೆಲಸ ನಿರ್ವಹಿಸುತ್ತಿರುವ ವೈದ್ಯರಿಗೆ ಹಾಗೂ ಇತರ ಕಾಯಂ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದಾಗ ಇಲ್ಲಿಯೇ ಚಿಕಿತ್ಸೆ ನೀಡಲಾಗಿದೆ. ಆದರೆ, ಕೋವಿಡ್ ಧೃಡಪಟ್ಟ ಗುತ್ತಿಗೆ ಕಾರ್ಮಿಕರಿಗೆ ಇಲ್ಲೇ ಚಿಕಿತ್ಸೆ ನೀಡಲು ನಿರಾಕರಿಸಲಾಗಿದೆ. ಅವರ ಚಿಕಿತ್ಸೆಗೆ ಬೇರೆ ಕೋವಿಡ್‌ ಆಸ್ಪತ್ರೆಯಲ್ಲಾಗಲೀ ಅಥವಾ ಕೋವಿಡ್ ಆರೈಕೆ ಕೇಂದ್ರಗಳಲ್ಲಾಗಲೀ ವ್ಯವಸ್ಥೆ ಕಲ್ಪಿಸದೇ ಮನೆಯಲ್ಲೇ ಆರೈಕೆಗೆ ಒಳಗಾಗುವಂತೆ ಸೂಚಿಸಲಾಗಿದೆ’ ಎಂದು ಆರೋಪಿಸಿ ಸಂಸ್ಥೆಯ ಹೊರಗುತ್ತಿಗೆ ಸಿಬ್ಬಂದಿ ಬೆಳಿಗ್ಗೆ ಸಾಂಕೇತಿಕ ಪ್ರತಿಭಟನೆ ನಡೆಸಿದ್ದರು. ತಮಗೂ ನಿಮಾನ್ಸ್‌ನಲ್ಲೇ ಆರೈಕೆಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದರು.

‘ಕಳೆದ ತಿಂಗಳು 18 ಮಂದಿ ಹೊರಗುತ್ತಿಗೆ ಸಿಬ್ಬಂದಿಗೆ ಸೋಂಕು ತಗುಲಿತ್ತು. ಗುರುವಾರ ಮತ್ತೆ ಮೂವರು ಸಿಬ್ಬಂದಿಗೆ ಸೋಂಕು ತಗುಲಿದೆ. ಇವರನ್ನು ನಿಮ್ಹಾನ್ಸ್‌ನಲ್ಲಿ ದಾಖಲಿಕೊಂಡಿಲ್ಲ. ಒಬ್ಬರನ್ನು ಮಾತ್ರ ಜಿಕೆವಿಕೆಯ ಕೋವಿಡ್‌ ಆರೈಕೆ ಕೇಂದ್ರಕ್ಕೆ ದಾಖಲಿಸಲಾಗಿದೆ. ಉಳಿದವರಿಬ್ಬರೂ ಮನೆಯಲ್ಲೇ ಆರೈಕೆಗೆ ಒಳಗಾಗುತ್ತಿದ್ದಾರೆ. ನಿಮ್ಹಾನ್ಸ್‌ ಕಾಯಂ ಸಿಬ್ಬಂದಿಗೆ ಹಾಗೂ ವೈದ್ಯರ ಕೋವಿಡ್‌ ಚಿಕಿತ್ಸೆಗೆ ಸಂಸ್ಥೆಯ ಇನ್ಫೊಸಿಸ್‌ ಕಟ್ಟಡ ಹಾಗೂ ಕಬಿನಿ ಹಾಸ್ಟೆಲ್‌ನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಗುತ್ತಿಗೆ ಸಿಬ್ಬಂದಿಗೆ ಇಲ್ಲಿ ಚಿಕಿತ್ಸೆ ನೀಡಲು ನಿರಾಕರಿಸುವುದು ಎಷ್ಟು ಸರಿ’ ಎಂದು ಹೊರಗುತ್ತಿಗೆ ಕಾರ್ಮಿಕರೊಬ್ಬರು ಪ್ರಶ್ನಿಸಿದರು.

ADVERTISEMENT

‘ಬಹುತೇಕ ಹೊರಗುತ್ತಿಗೆ ಸಿಬ್ಬಂದಿಯ ಮನೆಗಳು ತೀರಾ ಚಿಕ್ಕವು. ಮನೆಯಲ್ಲಿ ಕ್ವಾರಂಟೈನ್ ಆಗಲು ಸಾಧ್ಯವಿಲ್ಲ. ಆದರೂ ಮನೆಯಲ್ಲೇ ಪ್ರತ್ಯೇಕ ವಾಸ ಅನುಭವಿಸಬೇಕಾಗಿದೆ. ಇದರಿಂದ ನಮ್ಮ ಮನೆಯವರಿಗೆ ಸೋಂಕು ಹರಡುವ ಅಪಾಯವಿದೆ’ ಎಂದು ಅವರು ವಿವರಿಸಿದರು.

‘ನಮ್ಮವರಿಗೆ ಸೋಂಕು ತಗುಲಿದರೂ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು. ಸ್ವಚ್ಛತಾ ಕಾರ್ಮಿಕರಿಗೂ ಸುರಕ್ಷಾ ಕವಚಗಳು, ವೈಯಕ್ತಿಕ ಸುರಕ್ಷಾ ಸಾಧನಗಳು (ಪಿಪಿಇ ಕಿಟ್‌) ಒದಗಿಸಬೇಕು. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನಾ ಪ್ಯಾಕೇಜ್ ಅಡಿಯಲ್ಲಿ ₹ 50 ಲಕ್ಷ ಮೊತ್ತದ ವಿಮೆ ಕಲ್ಪಿಸಬೇಕು. ಬಟ್ಟೆ ಬದಲಾಯಿಸಲು ಮತ್ತು ಸ್ನಾನಕ್ಕೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಬೇಕು. ಒಂದು ತಿಂಗಳ ವೇತನವನ್ನು ಪ್ರೋತ್ಸಾಹಧನವನ್ನಾಗಿ ನೀಡಬೇಕು’ ಎಂದು ಒತ್ತಾಯಿಸಿದರು.

‘ಸಿಬ್ಬಂದಿಯೇ ಸ್ವಯಂಪ್ರೇರಿತವಾಗಿ ಸುಮಾರು ಒಂದು ಗಂಟೆ ಆಸ್ಪತ್ರೆ ಆವರಣದಲ್ಲಿ ನಿಂತು ತಮ್ಮ ಹಕ್ಕುಗಳಿಗೆ ಬೇಡಿಕೆ ಸಲ್ಲಿಸಿದ್ದರು. ಇದಕ್ಕೆ ಕುಮ್ಮಕ್ಕು ನೀಡಿದ ಆರೋಪ ಹೊರಿಸಿ ಆರು ಮಂದಿಯನ್ನು ಕೆಲಸದಿಂದ ತೆಗೆದಿದ್ದಾರೆ. ನಮ್ಮ ವಿರುದ್ಧ ಪೊಲೀಸ್‌ ಠಾಣೆಯಲ್ಲೂ ದೂರು ದಾಖಲಿಸಿದ್ದಾರೆ’ ಎಂದು ಹೊರಗುತ್ತಿಗೆ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕೆಲಸದಿಂದ ತೆಗೆದಿಲ್ಲ: ನಿಮ್ಹಾನ್ಸ್‌

ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದ ನಿಮ್ಹಾನ್ಸ್‌ ನಿರ್ದೇಶಕ ಡಾ.ಬಿ.ಎನ್‌.ಗಂಗಾಧರಯ್ಯ, ‘ಹೊರಗುತ್ತಿಗೆ ಸಿಬ್ಬಂದಿ ಕಾರಣ ಇಲ್ಲದೇ ದುರುದ್ದೇಶಪೂರ್ವಕವಾಗಿ ಪ್ರತಿಭಟನೆ ನಡೆಸಿದ್ದಾರೆ. ಅವರಿಗೆ ಇಎಸ್‌ಐ ಹಾಗೂ ಪಿಎಫ್‌ ಸೌಲಭ್ಯ ಕಲ್ಪಿಸಿದ್ದೇವೆ. ಕೋವಿಡ್‌ ಸೋಂಕು ತಗುಲಿದವರ ಆರೈಕೆಗೆ ಹಾಗೂ ಕೋವಿಡ್‌ ಪರೀಕ್ಷೆಗೆ ಸಕಲ ನೆರವು ಒದಗಿಸಿದ್ದೇವೆ. ನಿಮ್ಹಾನ್ಸ್‌ ಸಿಬ್ಬಂದಿಗೆ ನಮ್ಮ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಬೇಕಾಗುತ್ತದೆ. ಯಾರನ್ನೂ ಕೆಲಸದಿಂದ ತೆಗೆದಿಲ್ಲ. ಕೆಲವು ಸಿಬ್ಬಂದಿ ಬದಲು ಬೇರೆಯವರನ್ನು ನಿಯೋಜಿಸುವಂತೆ ಹೊರಗುತ್ತಿಗೆ ಪಡೆದ ಸಂಸ್ಥೆಯನ್ನು ಕೋರಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.