ಬೆಂಗಳೂರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ (ನಿಮ್ಹಾನ್ಸ್) ನಿರ್ಮಿಸಲಾಗಿರುವ ತಂಬಾಕು ಉತ್ಪನ್ನಗಳ ಪರೀಕ್ಷಾ ಪ್ರಯೋಗಾಲಯಕ್ಕೆ ನಗರದಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.
ಈ ಪ್ರಯೋಗಾಲಯವನ್ನು ಆರೋಗ್ಯ ಸಚಿವಾಲಯದ ಉಪ ಮಹಾನಿರ್ದೇಶಕ ರಾಜೇಂದ್ರ ಜೋಶಿ ಉದ್ಘಾಟಿಸಿದರು. ಸಂಸ್ಥೆಯ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಉಪಸ್ಥಿತರಿದ್ದರು. ಇದು ನಾಲ್ಕನೇ ರಾಷ್ಟ್ರೀಯ ತಂಬಾಕು ಉತ್ಪನ್ನಗಳ ಪ್ರಯೋಗಾಲಯವಾಗಿದೆ. ಸಾರ್ವಜನಿಕರ ಆರೋಗ್ಯ ವೃದ್ಧಿಗೆ ಸಹಕಾರಿಯಾದ ಸಂಶೋಧನೆಗಳನ್ನು ಇಲ್ಲಿ ಕೈಗೊಳ್ಳಲಾಗುತ್ತದೆ.
‘ಈ ಪ್ರಯೋಗಾಲಯವು ತಂಬಾಕು ಉತ್ಪನ್ನಗಳ ಸಮಗ್ರ ರಾಸಾಯನಿಕ ಮತ್ತು ಅಪಾಯಕಾರಿ ಅಂಶಗಳ ಬಗ್ಗೆ ವಿಶ್ಲೇಷಣೆ ನಡೆಸಲಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನಿಯಂತ್ರಣ ಮಾನದಂಡಗಳಿಗೆ ಅನುಗುಣವಾಗಿ ವೈಜ್ಞಾನಿಕ ಮೌಲ್ಯಮಾಪನ ನಡೆಸಿ, ನಿಯಂತ್ರಣ ಕ್ರಮಗಳಿಗೆ ಬೆಂಬಲ ನೀಡುತ್ತದೆ’ ಎಂದು ಸಂಸ್ಥೆಯ ವೈದ್ಯಕೀಯ ತಜ್ಞರು ತಿಳಿಸಿದರು.
‘ತಂಬಾಕು ನಿಯಂತ್ರಣ ಕ್ರಮಗಳನ್ನು ಬಲಪಡಿಸಲು, ಹಾನಿಕಾರಕ ಪದಾರ್ಥಗಳ ಮೇಲ್ವಿಚಾರಣೆಗೆ ಹಾಗೂ ಸಂಶೋಧನೆಗೆ ಈ ಪ್ರಯೋಗಾಲಯ ಸಹಕಾರಿಯಾಗಲಿದೆ. ವೈದ್ಯಕೀಯ ಸೌಲಭ್ಯ ಮತ್ತು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಸಂಸ್ಥೆಯ ಬದ್ಧತೆಯನ್ನು ಪರಿಗಣಿಸಿ ಇಲ್ಲಿ ಪ್ರಯೋಗಾಲಯ ಸ್ಥಾಪಿಸಲಾಗಿದೆ’ ಎಂದು ಡಾ.ಪ್ರತಿಮಾ ಮೂರ್ತಿ ಅಭಿಪ್ರಾಯಪಟ್ಟರು.
‘ತಂಬಾಕು ಉತ್ಪನ್ನಗಳ ನಿಯಂತ್ರಣಕ್ಕೆ ಈ ಪ್ರಯೋಗಾಲಯ ಮಹತ್ವದ ಕೊಡುಗೆಯಾಗುವ ನಿರೀಕ್ಷೆಯಿದೆ. ದೇಶದಲ್ಲಿ ತಂಬಾಕು ಉತ್ಪನ್ನಗಳ ಸೇವನೆಯಿಂದ ಉಂಟಾಗುವ ಅನಾರೋಗ್ಯ ಸಮಸ್ಯೆಗಳಿಗೂ ಕಡಿವಾಣ ಹಾಕಲು ನೆರವಾಗಲಿದೆ. ಈ ನಿಟ್ಟಿನಲ್ಲಿಯೇ ಕೇಂದ್ರ ಸರ್ಕಾರವು ಪ್ರಯೋಗಾಲಯ ನಿರ್ಮಿಸಿದೆ’ ಎಂದರು.
‘ತಂಬಾಕು ಉತ್ಪನ್ನಗಳ ಸೇವನೆಯು ಕ್ಯಾನ್ಸರ್ ಸೇರಿ ವಿವಿಧ ಅನಾರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಆದ್ದರಿಂದ ತಂಬಾಕು ಉತ್ಪನ್ನಗಳಿಂದ ಅಂತರ ಕಾಯ್ದುಕೊಂಡು, ಆರೋಗ್ಯಕಾರಿ ಜೀವನ ವಿಧಾನ ಅಳವಡಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.