ADVERTISEMENT

ನಿರಂಜನ ಆರ್‌.ಭಟ್ಟ ಅವರಿಗೆ ಶಾಂತಾ ರಾಧಾಕೃಷ್ಣ ದತ್ತಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 19:30 IST
Last Updated 12 ಜನವರಿ 2021, 19:30 IST
ನಿರಂಜನ ಆರ್‌.ಭಟ್ಟ
ನಿರಂಜನ ಆರ್‌.ಭಟ್ಟ   

ಬೆಂಗಳೂರು: ಗಿರಿನಗರದ ಎಸ್‌ಜಿಎಸ್‌ ವಾಗ್ದೇವಿ ಸೆಂಟರ್ ಫಾರ್‌ ರಿಹ್ಯಾಬಿಲಿಟೇಷನ್ ಆಫ್ ಕಮ್ಯುನಿಕೇಷನ್ ಇಂಪೇರ್‌ಡ್ ವತಿಯಿಂದ ವಾಕ್‌ ಮತ್ತು ಶ್ರವಣ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುವ ‘ಡಾ.ಶಾಂತಾ ರಾಧಾಕೃಷ್ಣ ದತ್ತಿ ಪ್ರಶಸ್ತಿ’ಗೆ ನಗರದ ನಿರಂಜನ ಆರ್‌.ಭಟ್ಟ ಅವರನ್ನು ಆಯ್ಕೆ ಮಾಡಲಾಗಿದೆ.

ನಿರಂಜನ ಅವರು ಸುರತ್ಕಲ್‌ ಎನ್‌ಐಟಿಕೆಯಲ್ಲಿ ಎಲೆಕ್ಟ್ರಿಕಲ್ಸ್‌ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಮೊದಲ ವರ್ಷದ ವಿದ್ಯಾರ್ಥಿ. ಈ ಪ್ರಶಸ್ತಿಯು ₹10 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಇದೇ 26ರಂದು ಸಂಜೆ 6 ಗಂಟೆಗೆ ಗಿರಿನಗರದಎಸ್‌ಜಿಎಸ್‌ ವಾಗ್ಧೇವಿ ಸೆಂಟರ್‌ನಲ್ಲಿ ನಡೆಯಲಿರುವ ಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ADVERTISEMENT

‘ಗಣಪತಿ ಸಚ್ಚಿದಾನಂದ ಸ್ವಾಮೀಜಿ, ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆಯಲಿರುವ ಕಾರ್ಯಕ್ರಮದ ಅತಿಥಿಗಳಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್ ಕುಮಾರ್, ಸಂಸದ ತೇಜಸ್ವಿ ಸೂರ್ಯ, ಶಾಸಕ ಎಲ್‌.ಎ.ರವಿ ಸುಬ್ರಹ್ಮಣ್ಯ, ಮೈಸೂರು ಅವಧೂತ ದತ್ತ ಪೀಠದ ಟ್ರಸ್ಟಿ ಎಚ್‌.ವಿ.ಪ್ರಸಾದ್, ಅಂಗವಿಕಲ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕ ವಿ.ಮುನಿರಾಜು ಹಾಗೂ ‘ಪ್ರಜಾವಾಣಿ’ಯ ಕಾರ್ಯನಿರ್ವಾಹಕ ಸಂಪಾದಕ ಎಸ್‌.ರವೀಂದ್ರ ಭಟ್ಟ ಭಾಗವಹಿಸಲಿದ್ದಾರೆ’ ಎಂದು ಸಂಸ್ಥೆಯ ನಿರ್ದೇಶಕಿ ಶಾಂತಾ ರಾಧಾಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹುಟ್ಟಿನಿಂದ ಶ್ರವಣ ದೋಷ ಹೊಂದಿದ್ದ ನಿರಂಜನ ಮೈಸೂರಿನ ರೋಟರಿ ಶ್ರವಣದೋಷವುಳ್ಳ ಮಕ್ಕಳ ಮತ್ತು ತಾಯಂದಿರ ಶಾಲೆಯಲ್ಲಿ ಮಾತು ಕಲಿತಿದ್ದರು. ಎಸ್ಸೆಸ್ಸೆಲ್ಸಿಯಲ್ಲಿ ಶೇ 79 ಅಂಕ,ಪಿಯುಸಿಯಲ್ಲಿ ಶೇ 83 ಅಂಕ ಹಾಗೂ ಜೆಇಇ ಮುಖ್ಯ ಪರೀಕ್ಷೆಯಲ್ಲಿ ದೇಶಕ್ಕೆ 307ನೇ ರ‍್ಯಾಂಕ್ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.