ADVERTISEMENT

ನಿಟ್ಟೆ ಕಾಲೇಜು: ಅಂತರರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 16:03 IST
Last Updated 1 ಆಗಸ್ಟ್ 2025, 16:03 IST
   

ಯಲಹಂಕ: ಗಣಿತದ ಅಂಕಿ-ಅಂಶಗಳ ಆಧಾರದ ಮೇಲೆ ಅತ್ಯಂತ ಅಲ್ಪಾವಧಿಯಲ್ಲಿ ಪರಿಹಾರಗಳನ್ನು ಸೂಚಿಸಲು ಮತ್ತು ಕೆಲಸದ ವೇಗ ಹೆಚ್ಚಿಸುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆಯು ಮನುಷ್ಯನ ಜೀವನಕ್ಕೆ ಅಗತ್ಯವಾಗಿ ಬೇಕಾಗಿದೆ ಎಂದು ಸ್ಪೇನ್‌ ದೇಶದ ಸಾಲಮಂಕ ವಿಶ್ವವಿದ್ಯಾಲಯದ ಮುಖ್ಯಾಧಿಕಾರಿ ಜುವಾನ್‌ ಮ್ಯಾನುಯಲ್‌ ಕೊರ್ಚಾಡೊ ಅಭಿಪ್ರಾಯಪಟ್ಟರು.

ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಐಇಇಇ ಬೆಂಗಳೂರು ಶಾಖೆಯ ಸಹಯೋಗದಲ್ಲಿ ಆಯೋಜಿಸಿರುವ ಅಂತರ್ಜಾಲ, ಬಹುಮಾಧ್ಯಮ ಹಾಗೂ ಮಾಹಿತಿ ತಂತ್ರಜ್ಞಾನಗಳ ಕುರಿತ ಎರಡು ದಿನಗಳ ‘ಎನ್ಎಂಐಟಿ.ಕಾನ್‌-2025ʼ ಅಂತರರಾಷ್ಟ್ರೀಯ ಸಮ್ಮೇಳನವನ್ನು(ಮೂರನೇ ಆವೃತ್ತಿ‌) ಉದ್ಘಾಟಿಸಿ ಅವರು ಮಾತನಾಡಿದರು.

‘ಕೃತಕ ಬುದ್ದಿಮತ್ತೆ ಮತ್ತು ಅದರ ಮುಂದುವರಿದ ತಂತ್ರಜ್ಞಾನಗಳು ಮನುಷ್ಯನ ಸೃಷ್ಟಿಗಳೇ ಆಗಿವೆ. ಇದರಿಂದ ಮುನುಷ್ಯ ಉದ್ಯೋಗ ಕಳೆದುಕೊಳ್ಳುವುದಿಲ್ಲ, ಬದಲಿಗೆ ಆ ಉದ್ಯೋಗ ಬೇರೆ ಸ್ವರೂಪದಲ್ಲಿರುತ್ತದೆ’ ಎಂದರು.

ADVERTISEMENT

ಥಾಯ್ಲೆಂಡ್‌ ದೇಶದ ಚುಲಾಲಾಂಗ್‌ಕಾರ್ನ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಸುಪವದೀ ಅರಂವಿತ್‌ ಮಾತನಾಡಿದರು.

ವಿಶ್ವದ ವಿವಿಧ ಭಾಗಗಳಿಂದ ಬಂದಿರುವ ಸಂಶೋಧನಾ ವಿದ್ಯಾರ್ಥಿಗಳು ವಿಚಾರ ಸಂಕಿರಣದಲ್ಲಿ ಮಂಡಿಸಲು ಒಟ್ಟು 4260 ಸಂಶೋಧನಾ ಪ್ರಬಂಧ-ಪ್ರಾಜೆಕ್ಟ್‌ಗಳನ್ನು ಸಲ್ಲಿಸಿದ್ದಾರೆ. ಇದರಲ್ಲಿ 289 ಸಂಶೋಧನಾ ಪ್ರಾಜೆಕ್ಟ್‌ಗಳನ್ನು ಸಾದರಪಡಿಸಲು ಆಯ್ಕೆ ಮಾಡಲಾಗಿದೆ. ಅತ್ಯುತ್ತಮ ಪ್ರಬಂಧಗಳಿಗೆ ಪ್ರಶಸ್ತಿಪತ್ರ ನೀಡಲಾಗುವುದು ಎಂದು ಪ್ರಾಚಾರ್ಯ ಎಚ್‌.ಸಿ.ನಾಗರಾಜ್‌ ಮಾಹಿತಿ ನೀಡಿದರು.

ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಶನ್‌ ವಿಭಾಗದ ಮುಖ್ಯಸ್ಥ ಪರಮೇಶಾಚಾರಿ.ಬಿ.ಡಿ, ನಿಟ್ಟೆ ಶಿಕ್ಷಣಸಂಸ್ಥೆಯ ಆಡಳಿತಾಧಿಕಾರಿ ರೋಹಿತ್‌ ಪೂಂಜ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.