ADVERTISEMENT

ಶಾಲೆಗೆ ಹೋಗಲು 4 ಕಿ.ಮೀ. ನಡಿಗೆ !

ಬಸ್‌ ಸೌಲಭ್ಯವಿಲ್ಲದೆ ತೊಂದರೆ * ಶಾಲೆ ತೊರೆಯುತ್ತಿರುವ ವಿದ್ಯಾರ್ಥಿನಿಯರು

ಸಿ.ಎಸ್.ನಿರ್ವಾಣ ಸಿದ್ದಯ್ಯ
Published 14 ಮಾರ್ಚ್ 2020, 21:37 IST
Last Updated 14 ಮಾರ್ಚ್ 2020, 21:37 IST
ಶಾಲೆಗೆ ನಡೆದುಕೊಂಡು ಹೋಗುತ್ತಿರುವ ವಿದ್ಯಾರ್ಥಿನಿಯರು
ಶಾಲೆಗೆ ನಡೆದುಕೊಂಡು ಹೋಗುತ್ತಿರುವ ವಿದ್ಯಾರ್ಥಿನಿಯರು   

ಹೆಸರಘಟ್ಟ: ಗ್ರಾಮದಿಂದ ವಿದ್ಯಾರ್ಥಿಗಳು ಪ್ರೌಢಶಾಲೆಗೆ ಹೋಗಿ ಬರಬೇಕೆಂದರೆ ನಿತ್ಯ ನಾಲ್ಕು ಕಿ.ಮೀ. ನಡೆಯಬೇಕಿದೆ. ಸಕಾಲದಲ್ಲಿ ಬಸ್‌ ಸೌಲಭ್ಯವಿಲ್ಲದ ಕಾರಣ 2 ಕಿ.ಮೀ. ದೂರದ ಶಾಲೆಗೆ ಹೋಗಿ ಬರಬೇಕಾದ ಅನಿವಾರ್ಯತೆಯಲ್ಲಿ ವಿದ್ಯಾರ್ಥಿಗಳಿದ್ದಾರೆ.

‘ನಮ್ಮ ಊರಿನಲ್ಲಿ ಪ್ರೌಢಶಾಲೆ ಇಲ್ಲ. ಐವರಕಂಡಪುರದಲ್ಲಿರುವ ಪ್ರೌಢಶಾಲೆ ನಮ್ಮೂರಿಗೆ 5 ಕಿ.ಮೀ. ದೂರದಲ್ಲಿದೆ. ಶಾಲಾ ಸಮಯದಲ್ಲಿ ಬಸ್‌ ಸೌಲಭ್ಯವಿಲ್ಲ. ಹೆಸರಘಟ್ಟದಿಂದ ಟಿ.ಬಿ. ಕ್ರಾಸ್‌ವರೆಗೆ ಬಸ್‌ನಲ್ಲಿ ಹೋಗಿ, ಅಲ್ಲಿಂದ 2 ಕಿ.ಮೀ. ನಡೆದು ಹೋಗಬೇಕು. ಮತ್ತೆ 2 ಕಿ.ಮೀ. ನಡೆದು ಬರಬೇಕಾಗಿದೆ’ ಎಂದುಗ್ರಾಮದ ನಿವಾಸಿ ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದರು.

‘ಸುಮಾರು 6 ಕಿ.ಮೀ. ದೂರದಲ್ಲಿರುವ ತೋಟಗೆರೆ ಪ್ರೌಢಶಾಲೆಗೆ ಬಿ.ಎಂ.ಟಿ.ಸಿ. ಬಸ್ಸುಗಳು ವಿರಳವಾಗಿವೆ. ಗ್ರಾಮಾಂತರ ಸಾರಿಗೆ ಬಸ್ಸುಗಳಿದ್ದರೂ, ಅವುಗಳು ನಿಗದಿತ ಸಮಯಕ್ಕೆ ಬರುವುದಿಲ್ಲ. ಪರೀಕ್ಷೆ ಸಂದರ್ಭದಲ್ಲಿ ಸಮಯ ಎಲ್ಲಿ ಮೀರಿ ಹೋಗುತ್ತದೆಯೋ ಎನ್ನುವ ಭಯದಿಂದ ನಡೆದುಕೊಂಡೇ ಶಾಲೆಗೆ ಹೋಗುತ್ತೇವೆ’ ಎಂದು 9ನೇ ತರಗತಿ ವಿದ್ಯಾರ್ಥಿ ಸಂತೋಷ ಹೇಳಿದರು.

ADVERTISEMENT

‘ಹೆಸರಘಟ್ಟ ಗ್ರಾಮದಲ್ಲಿ ಹೆಚ್ಚಿನ ಜನ ಕೂಲಿ ಕಾರ್ಮಿಕರಿದ್ದಾರೆ. ಖಾಸಗಿ ಶಾಲಾ ವಾಹನಗಳ ವ್ಯವಸ್ಥೆ ಮಾಡಿಸಿ,ವಿದ್ಯಾಭ್ಯಾಸ ಕೊಡಿಸುವ ಶಕ್ತಿ ಅವರಿಗಿಲ್ಲ’ ಎಂದುಬಿಳಿಜಾಜಿ ಗ್ರಾಮದ ನಿವಾಸಿ ಗೋವಿಂದರಾಜು ತಿಳಿಸಿದರು.

‘ಹೆಸರಘಟ್ಟದಲ್ಲಿಯೇ ಪ್ರೌಢಶಾಲೆ ಪ್ರಾರಂಭವಾದರೆ ಬಿಳಿಜಾಜಿ, ಗುಡ್ಡದಹಳ್ಳಿ, ದಾಸನೇಹಳ್ಳಿ, ಸೀರೆಸಂದ್ರ, ಬ್ಯಾತ ಗ್ರಾಮದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಎಲ್ಲ ಗ್ರಾಮಗಳಿಂದ ಹೆಸರಘಟ್ಟಕ್ಕೆ ಬಸ್ಸಿನ ಸೌಕರ್ಯವಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.