ADVERTISEMENT

ಚಾರ್ಜ್ ಆಗದ ‘ಇ–ವಾಹನ’

ಸಬ್ಸಿಡಿ ನೀಡಿದರೂ ವಿದ್ಯುತ್ ಚಾಲಿತ ವಾಹನಗಳ ಖರೀದಿಗೆ ನಿರುತ್ಸಾಹ l ಗಡುವು ಮೀರಿದರೂ ನಿರ್ಮಾಣವಾಗದ ಚಾರ್ಜಿಂಗ್‌ ಕೇಂದ್ರಗಳು

ವರುಣ ಹೆಗಡೆ
Published 8 ಡಿಸೆಂಬರ್ 2019, 20:00 IST
Last Updated 8 ಡಿಸೆಂಬರ್ 2019, 20:00 IST
   

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ಹಾಗೂ ಶಬ್ದಮಾಲಿನ್ಯ ನಿಯಂತ್ರಣಕ್ಕೆ ವಿದ್ಯುತ್ ಚಾಲಿತ ವಾಹನಗಳು ಪರಿಹಾರ. ಆದರೆ, 80 ಲಕ್ಷಕ್ಕೂ ಅಧಿಕ ವಾಹನಗಳಿರುವ ನಗರದಲ್ಲಿ ಪರಿಸರಸ್ನೇಹಿ ಎಲೆಕ್ಟ್ರಿಕ್‌ ವಾಹನಗಳ ಪ್ರಮಾಣವನ್ನು ಹೆಚ್ಚಿಸುವ ಪ್ರಯತ್ನ ನಿರೀಕ್ಷಿತ ಪ್ರಗತಿ ಕಂಡಿಲ್ಲ.

ರಾಜ್ಯ ಸರ್ಕಾರ 2017ರಲ್ಲಿ ಎಲೆಕ್ಟ್ರಿಕ್‌ ವಾಹನಗಳ ನೀತಿಯನ್ನು ಪ‍್ರಕಟಿಸಿದೆ.ಮಾಲಿನ್ಯ ನಿಯಂತ್ರಣ ಹಾಗೂ ಶುದ್ಧ ವಾತಾವರಣ ಹೊಂದುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಸಾರಿಗೆ ಇಲಾಖೆಗೆಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯೂ (ಕೆಎಸ್‌ಪಿಸಿಬಿ) ಸೂಚಿಸಿದೆ. ಆದರೆ, ವಿದ್ಯುತ್ ಚಾಲಿತ ವಾಹನಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಅನೇಕ ಬಾರಿ ಚರ್ಚೆಗಳು ನಡೆದಿವೆ. ಇಷ್ಟೆಲ್ಲಾ ಆದರೂ ನಗರದ ರಸ್ತೆಯಲ್ಲಿ ಓಡಾಡುವ ಇ–ವಾಹನಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ.

ಅದೇ ರೀತಿ,ಪೆಟ್ರೋಲ್‌-ಡೀಸೆಲ್‌ ಆಧಾರಿತ ವಾಹನಗಳಿಗೆ ಹೋಲಿಸಿದರೆ ವಿದ್ಯುತ್ ಚಾಲಿತ ವಾಹನಗಳು ತುಸು ದುಬಾರಿ. ಇ–ವಾಹನ ಚಾರ್ಜ್‌ ಮಾಡಲು ಕೇಂದ್ರಗಳನ್ನು ಹುಡುಕುತ್ತಾ ಅಲೆದಾಟ ನಡೆಸಬೇಕಾದ ಪರಿಸ್ಥಿತಿ ಇದೆ. ಈ ಕಾರಣಕ್ಕಾಗಿಯೇ ಜನ ಇ– ವಾಹನ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ನಗರದಲ್ಲಿ ನಿತ್ಯ ಸರಾಸರಿ 1,750 ವಾಹನ ನೋಂದಣಿಯಾಗುತ್ತಿದ್ದು, ಇದರಲ್ಲಿ ವಿದ್ಯುತ್ ಚಾಲಿತ ವಾಹನಗಳ ಸಂಖ್ಯೆ ಎರಡು ಮಾತ್ರ.

ADVERTISEMENT

2030ರ ಹೊತ್ತಿಗೆ ದೇಶದಲ್ಲಿ ಸಾರ್ವಜನಿಕ ಸಾರಿಗೆಯ ಎಲ್ಲ ವಾಹನಗಳು ಮತ್ತು ಖಾಸಗಿ ಬಳಕೆಯ ಶೇ 40ರಷ್ಟು ವಾಹನಗಳು ವಿದ್ಯುತ್‌ ಚಾಲಿತ ಆಗಿರಬೇಕು ಎಂದು ಕೇಂದ್ರ ಸರ್ಕಾರ ಗುರಿ ನಿಗದಿಪಡಿಸಿದೆ. ಆದರೆ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶಕ್ಕೇ ರಾಜಧಾನಿ ಎಂದು ಬಿಂಬಿತವಾದ ಬೆಂಗಳೂರು ಮಾತ್ರ ಈ ಗುರಿಸಾಧನೆಗೆ ಅಣಿಯಾಗಿರುವಂತೆ ಕಾಣಿಸುತ್ತಿಲ್ಲ. ವಿದ್ಯುತ್ ಚಾಲಿತ ವಾಹನ ಬಳಕೆಯ ಪ್ರಯೋಜನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲೂ ಸಾರಿಗೆ ಇಲಾಖೆ ವಿಫಲವಾಗಿರುವುದನ್ನು ಅಂಕಿ–ಅಂಶಗಳೇ ಹೇಳುತ್ತಿವೆ.

ರಾಜ್ಯದಲ್ಲಿ ಈವರೆಗೆ 33,159 ವಿದ್ಯುತ್ ಚಾಲಿತ ವಾಹನಗಳು ನೋಂದಣಿಯಾಗಿವೆ. ಇದರಲ್ಲಿ 20ಸಾವಿರಕ್ಕೂ ಅಧಿಕ ವಾಹನಗಳು ನಗರದಲ್ಲಿವೆ. ಇವುಗಳಲ್ಲಿ ತ್ರಿಚಕ್ರ ವಾಹನಗಳ ಪ್ರಮಾಣ ಅರ್ಧಕ್ಕಿಂತಲೂ ಹೆಚ್ಚು. ಸದ್ಯ 58 ಲಕ್ಷ ದ್ವಿಚಕ್ರ ವಾಹನಗಳು ನಗರದಲ್ಲಿವೆ. ಈ ವರ್ಷ 2.5 ಲಕ್ಷ ದ್ವಿಚಕ್ರ ವಾಹನಗಳು ನೋಂದಣಿಯಾದರೂ ಇದರಲ್ಲಿ ವಿದ್ಯುತ್ ಚಾಲಿತ ವಾಹನಗಳ ಸಂಖ್ಯೆ 2 ಸಾವಿರ ದಾಟಿಲ್ಲ.

ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ವಿಜ್ಞಾನಿಗಳು ನಡೆಸಿದ ಸಂಶೋಧನೆಯ ಪ್ರಕಾರ ನಗರದಲ್ಲಿ ಮಾಲಿನ್ಯ ಹೆಚ್ಚಲು ಸಾರ್ವಜನಿಕ ಸಾರಿಗೆ ವ್ಯವಸ್ಥೆ ದುರ್ಬಲವಾಗಿರುವುದೇ ಪ್ರಮುಖ ಕಾರಣ. ‘ನಗರದಲ್ಲಿ ಶೇ 43ರಷ್ಟು ಮಾಲಿನ್ಯ ವಾಹನಗಳಿಂದಲೇ ಆಗುತ್ತಿದೆ’ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ವಾಹನಗಳು ಉಗುಳುವ ಹೊಗೆಯಿಂದ ಸಂಚಾರ ಪೊಲೀಸರಲ್ಲಿ ಹೃದಯ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದು ಜಯದೇವ ಹೃದ್ರೋಗ ಸಂಸ್ಥೆ ನಡೆಸಿದ ಅಧ್ಯಯನದಿಂದ ಸಾಬೀತಾಗಿದೆ. ಅದೇ ರೀತಿ, ವಾಹನಗಳ ಹೊಗೆಯಿಂದ ಸಾರ್ವಜನಿಕರಲ್ಲಿ ಉಸಿರಾಟ ಸೇರಿದಂತೆ ಹಲವು ಬಗೆಯ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.

ದುಬಾರಿ ಬ್ಯಾಟರಿ: ‘ಎಲೆಕ್ಟ್ರಿಕ್ ವಾಹನಗಳ ತಯಾರಿಕೆಯಲ್ಲಿ ಚೀನಾ ಜಗತ್ತಿನಲ್ಲಿಯೇ ಮುಂಚೂಣಿಯಲ್ಲಿದೆ. 500ಕ್ಕೂ ಅಧಿಕ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿಗಳು ಆ ದೇಶದಲ್ಲಿವೆ. ದೇಸಿ ವಾಹನ ತಯಾರಿಕಾ ಕಂಪನಿಗಳೂ ಬ್ಯಾಟರಿಗಳನ್ನು ಚೀನಾದಿಂದಲೇಹೆಚ್ಚಾಗಿ ಆಮದು ಮಾಡಿಕೊಳ್ಳುತ್ತಿವೆ. ಲಿಥಿಯಂ ಬ್ಯಾಟರಿಗಳ ದರ ₹ 1 ಲಕ್ಷಕ್ಕಿಂತ ಹೆಚ್ಚು ಇದೆ. ವಾಹನದ ಬ್ಯಾಟರಿಯನ್ನು 2ರಿಂದ 3 ವರ್ಷಗಳಿಗೊಮ್ಮೆ ಬದಲಾಯಿಸಬೇಕಾಗುತ್ತದೆ. ಇದು ಕೂಡ ವಿದ್ಯುತ್ ಚಾಲಿತ ವಾಹನಗಳ ಖರೀದಿಗೆ ಗ್ರಾಹಕರು ಹಿಂದೇಟು ಹಾಕಲು ಪ್ರಮುಖ ಕಾರಣ’ ಎಂದು ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಅಲ್ಪಾವಧಿಯಲ್ಲೇ ಚಾರ್ಜ್‌ ಆಗುವಂತಹ ಬ್ಯಾಟರಿಯನ್ನು ದೇಸಿ ತಂತ್ರಜ್ಞಾನ ಬಳಸಿ ಆವಿಷ್ಕಾರ ಮಾಡಬೇಕು. ಆಗ ಚೀನಾದ ಮೇಲೆ ಅವಲಂಬನೆ ತಪ್ಪಲಿದೆ. ಸದ್ಯ ವಾಹನಗಳ ಮಾದರಿ ಹಾಗೂ ವಿನ್ಯಾಸದಲ್ಲಿ ಹೆಚ್ಚಿನ ಆಯ್ಕೆಗಳಿಲ್ಲ. ವಿದ್ಯುತ್ ಚಾಲಿತ ವಾಹನಗಳಿಗೆ ತೆರಿಗೆಯಲ್ಲಿ ರಿಯಾಯಿತಿ ನೀಡಿದ ಬಳಿಕ ಇ–ವಾಹನ ತಯಾರಿಕೆಗೆ ಕಂಪನಿಗಳು ಆಸಕ್ತಿ ತೋರುತ್ತಿವೆ’ ಎಂದು ಹೇಳುತ್ತಾರೆ ಅವರು.

ಜಿಎಸ್‌ಟಿ ಮಂಡಳಿಯು ವಿದ್ಯುತ್ ಚಾಲಿತ ವಾಹನಗಳ ಮೇಲಿನ ತೆರಿಗೆಯನ್ನು ಶೇ 12 ರಿಂದ ಶೇ 5ಕ್ಕೆ ಮತ್ತು ಚಾರ್ಜಿಂಗ್‌ ಸ್ಟೇಷನ್‌ಗಳ ಮೇಲಿನ ತೆರಿಗೆಯನ್ನು ಶೇ 18 ರಿಂದ ಶೇ 5ಕ್ಕೆ ತಗ್ಗಿಸಿದ ಬಳಿಕ ವಾಹನಗಳ ದರ ಇಳಿಕೆ ಆಗಿತ್ತು. ಅಷ್ಟಾಗಿಯೂ ಗ್ರಾಹಕರು ಖರೀದಿಗೆ ಆಸಕ್ತಿ ತೋರಿಸುತ್ತಿಲ್ಲ. ಇ– ವಾಹನಗಳ ಪ್ರಮಾಣವನ್ನು ಶತಾಯಗತಾಯ ಹೆಚ್ಚಳ ಮಾಡಲೇಬೇಕೆಂದು ಪಣ ತೊಟ್ಟಿದ್ದ ಸಾರಿಗೆ ಇಲಾಖೆ ಅಧಿಕಾರಿಗಳು ಇದರಿಂದ ನಿರಾಶೆಗೊಳಗಾಗಿದ್ದಾರೆ. ಇ– ವಾಹನಗಳ ಹಿರಿಮೆ ಬಗ್ಗೆ ಜನರಿಗೆ ಮನವರಿಕೆ ಮಾಡುವ ಹೊಸ ದಾರಿಯ ಹುಡುಕಾಟದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.