ADVERTISEMENT

ಕೆಸಿ ಜನರಲ್‌ ಆಸ್ಪತ್ರೆಯಲ್ಲಿ ಕೋವಿಡ್‌ ಚಿಕಿತ್ಸೆ ಬೇಡ: ಡಾ. ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2020, 11:31 IST
Last Updated 14 ಏಪ್ರಿಲ್ 2020, 11:31 IST
ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ
ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ   

ಬೆಂಗಳೂರು: ಕೋವಿಡ್‌ ಸೋಂಕಿತರ ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆಗಳಿರುವುದರಿಂದ ಕೆಸಿ ಜನರಲ್‌ ಆಸ್ಪತ್ರೆಯಲ್ಲಿ ಕ ಕೋವಿಡ್ ಚಿಕಿತ್ಸೆ ನೀಡುವುದು ಬೇಡ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.

ಮಲ್ಲೇಶ್ವರದ ಕೆಸಿ ಜನರಲ್‌ ಆಸ್ಪತ್ರೆಯ ವೈದ್ಯರು, ದಾದಿಯರು ಹಾಗೂ ಲ್ಯಾಬ್‌ ತಂತ್ರಜ್ಞರಿಗೆ ಮುಖದ ಶೀಲ್ಡ್‌ ಹಾಗೂ ಪರ್ಸನಲ್‌ ಪ್ರೊಟೆಕ್ಟೀವ್‌ ಎಕ್ವಿಪ್ಮೆಂಟ್‌ ಕಿಟ್‌ಗಳನ್ನು ವಿತರಿಸಿ ಸುದ್ದಿಗಾರರ ಜತೆ ಮಾತನಾಡಿ, "ಕೆಸಿ ಜನರಲ್‌ ಆಸ್ಪತ್ರೆಯಲ್ಲಿ ಇತರ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದೇ ವೇಳೆ ಕೋವಿಡ್‌ ಸೋಂಕಿತರಿಗೂ ಇಲ್ಲಿ ಚಿಕಿತ್ಸೆ ನೀಡುವುದರಿಂದ ಸಾಮಾನ್ಯ ರೋಗಿಗಳಿಗೂ ಸೋಂಕು ತಗುಲುವ ಅಪಾಯ ಇರುತ್ತದೆ. ಆಸ್ಪತ್ರೆ ಸಿಬ್ಬಂದಿ ಹಾಗೂ ಇತರ ರೋಗಿಗಳ ಹಿತದೃಷ್ಟಿಯಿಂದ ಕೋವಿಡ್‌ ಶಂಕಿತರು, ಸೋಂಕಿತರಿಗೆ ಚಿಕಿತ್ಸೆ ನೀಡುವುದು ಬೇಡ ಎಂದು ನಿರ್ದೇಶಿಸಲಾಗಿದೆ" ಎಂದರು.

"ಫೀವರ್‌ ಕ್ಲಿನಿಕ್‌ಗಳನ್ನು ಸಹ ಪ್ರತ್ಯೇಕ ವಾರ್ಡ್‌ನಲ್ಲಿ ನಿರ್ವಹಿಸಬೇಕು. ಜ್ವರ, ಶೀತದ ರೋಗಿಗಳ ಚಿಕಿತ್ಸೆ ನೀಡುವಾಗಲೂ ಎಚ್ಚರವಹಿಸಬೇಕು. ಶಂಕಿತ - ಸೋಂಕಿತರ ನಿಗಾ, ಪರೀಕ್ಷೆ ಹಾಗೂ ಚಿಕಿತ್ಸೆ ಸಹ ಪ್ರತ್ಯೇಕ ಸ್ಥಳದಲ್ಲಿ ನಡೆಸಲು ಆಸ್ಪತ್ರೆ ಮುಖ್ಯಸ್ಥರಿಗೆ ಸೂಚಿಸಲಾಗಿದೆ" ಎಂದು ತಿಳಿಸಿದರು.

ADVERTISEMENT

"ಎಸ್‌ವಿಪಿ ಇಂಡಿಯಾ, ಟೈಟಾನ್‌ ಹಾಗೂ ಬಿ.ಪ್ಯಾಕ್‌ ಸಂಸ್ಥೆ ನೀಡಿದ್ದ 400 ಪಿಪಿಇ ಕಿಟ್‌ಗಳನ್ನು ಕೆಸಿ ಜನರಲ್‌ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗೆ ವಿತರಿಸಲಾಗಿದೆ. ಸರ್ಕಾರದ ವತಿಯಿಂದಲೂ ಪಿಪಿಇ ಕಿಟ್‌ಗಳನ್ನು ನೀಡಲಾಗುವುದು. ವೈದ್ಯ, ಸಿಬ್ಬಂದಿಯ ಆರೋಗ್ಯ ಸುರಕ್ಷತೆ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುವುದು" ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.