ADVERTISEMENT

ಐಸಿಯು ಹಾಸಿಗೆಗಳೇ ಇಲ್ಲ: ಕೋರ್ಟ್‌ಗೆ ಬಿಬಿಎಂಪಿ ಮಾಹಿತಿ

ಪರಿಸ್ಥಿತಿಯ ಭಯಾನಕತೆ ಬಗ್ಗೆ ಹೈಕೋರ್ಟ್ ಆತಂಕ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 20:58 IST
Last Updated 23 ಏಪ್ರಿಲ್ 2021, 20:58 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ನಗರದಲ್ಲಿ ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡಲು ಹೆಚ್ಚುವರಿ ಹಾಸಿಗೆ ವ್ಯವಸ್ಥೆಯನ್ನು ತಕ್ಷಣವೇ ಮಾಡುವಂತೆ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಶುಕ್ರವಾರ ಸಂಜೆ 5 ಗಂಟೆಯ ವೇಳೆಗೆ ಐಸಿಯುಗಳಲ್ಲಿ ಒಂದೇ ಒಂದು ಹಾಸಿಗೆಯೂ ಲಭ್ಯ ಇಲ್ಲ ಎಂಬ ಮಾಹಿತಿ ಪಡೆದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ‘ಪರಿಸ್ಥಿತಿ ಭಯಾನಕವಾಗಿದೆ’ ಎಂದು ಆತಂಕ ವ್ಯಕ್ತಪಡಿಸಿತು.

’ಶುಕ್ರವಾರ ಸಂಜೆ ವೇಳೆಗೆ 32 ಎಸ್‌ಡಿಯು (ಸ್ಟೆಪ್ ಡೌನ್ ಯುನಿಟ್) ಹಾಸಿಗೆಗಳು, ಐಸಿಯು ಮತ್ತು ವೆಂಟಿಲೇಟರ್ ಹೊಂದಿರುವ 11 ಹಾಸಿಗೆಗಳು ಲಭ್ಯ ಇವೆ. ಆದರೆ, ಐಸಿಯುನಲ್ಲಿ ಒಂದೇ ಒಂದು ಹಾಸಿಗೆಯೂ ಲಭ್ಯವಿಲ್ಲ’ ಎಂದು ಬಿಬಿಎಂಪಿ ಪರ ಹಾಜರಿದ್ದ ಮುಖ್ಯ ಆರೋಗ್ಯಾಧಿಕಾರಿ ಮತ್ತು ವಕೀಲರು ಮಾಹಿತಿ ನೀಡಿದರು. ‘ಹೆಚ್ಚುವರಿ ಹಾಸಿಗೆಗಳ ವ್ಯವಸ್ಥೆ ಮಾಡಿದ ವಿವರವನ್ನು ಮುಂದಿನ ವಿಚಾರಣೆ (ಮಂಗಳವಾರ) ವೇಳೆಗೆ ಸಲ್ಲಿಸಬೇಕು’ ಎಂದು ಪೀಠ ತಿಳಿಸಿತು.

ADVERTISEMENT

‘ಕೋವಿಡ್ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆ ಹೆಚ್ಚಿಸಲು ಸಾಧ್ಯ ಇದೆಯೇ ಎಂಬುದನ್ನು ತಕ್ಷಣವೇ ಪರಿಶೀಲಿಸಬೇಕು. ರಾಜಧಾನಿ ಸಮೀಪದ ಜಿಲ್ಲೆಗಳಲ್ಲಿ ಮೂರು ವರ್ಗದ ಹಾಸಿಗೆಗಳು ಲಭ್ಯತೆ ಇದೆಯೇ ಎಂಬುದನ್ನು ಗುರುತಿಸಬೇಕು’ ಎಂದು ಪೀಠ ನಿರ್ದೇಶನ ನೀಡಿತು.

‘ಕೋವಿಡ್ ಆಸ್ಪತ್ರೆಗಳ ಹೊರಗೆ ಸಹಾಯ ಕೇಂದ್ರಗಳನ್ನು ಸ್ಥಾಪಿಸಬೇಕು. ಆಮ್ಲಜನಕ ಲಭ್ಯತೆ ಬಗ್ಗೆ ಅಂಕಿ–ಅಂಶ ಸಹಿತ ಮಾಹಿತಿ ನೀಡಬೇಕು. ರೆಮ್‌ಡಿಸಿವಿರ್ ಚುಚ್ಚುಮದ್ದನ್ನು ತಯಾರಿಕರಿಂದ ನೇರವಾಗಿ ಖರೀದಿಸುವ ಬಗ್ಗೆ ಪ್ರತಿಕ್ರಿಯೆ ಸಲ್ಲಿಸಬೇಕು’ ಎಂದು ಪೀಠ ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.