ADVERTISEMENT

ಬಿಸಿಯೂಟಕ್ಕೆ ಈರುಳ್ಳಿ, ಬೆಳ್ಳುಳ್ಳಿ ಇಲ್ಲ

ಅಕ್ಷಯ ಪಾತ್ರಾ ಕ್ರಮಕ್ಕೆ ಸರ್ಕಾರದಿಂದಲೇ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2019, 5:28 IST
Last Updated 13 ನವೆಂಬರ್ 2019, 5:28 IST
 ಸಾಂದರ್ಭಿಕ ಚಿತ್ರ
 ಸಾಂದರ್ಭಿಕ ಚಿತ್ರ   

ಬೆಂಗಳೂರು: ಮಧ್ಯಾಹ್ನದ ಬಿಸಿಯೂಟಕ್ಕೆ ಈರುಳ್ಳಿ ಬಳಕೆಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಕಡ್ಡಾಯಗೊಳಿಸಿದ್ದರೂ, ಅಕ್ಷಯ ಪಾತ್ರಾ ಪ್ರತಿಷ್ಠಾನಕ್ಕೆ ವಿನಾಯಿತಿ ನೀಡಿದೆ.

ಅಕ್ಷಯ ಪಾತ್ರಾ ಪ್ರತಿಷ್ಠಾನವು ಪೂರೈಸುತ್ತಿರುವ ಬಿಸಿಯೂಟದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಗದಿಪಡಿಸಿದಅಗತ್ಯದ ಎಲ್ಲಾ ಪೌಷ್ಟಿಕಾಂಶಗಳೂ ಇವೆ, ಹೀಗಾಗಿ ಈರುಳ್ಳಿ, ಬೆಳ್ಳುಳ್ಳಿ ಇಲ್ಲದಿದ್ದರೂ ಅವರು ಸಿದ್ಧಪಡಿಸುವ ‘ಸಾತ್ವಿಕ’ ಬಿಸಿಯೂಟವನ್ನು ಮಕ್ಕಳು ಧಾರಾಳವಾಗಿ ಸೇವಿಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಸರ್ಕಾರ ನಿಗದಿಪಡಿಸಿದ ಬಿಸಿಯೂಟದ ಸಾಮಗ್ರಿಗಳ ಪಟ್ಟಿಯನ್ನು ಬದಲಿಸುವುದಾದರೆ ಸರ್ಕಾರದಿಂದ ಅನುಮತಿ ಪಡೆಯಬೇಕಾಗುತ್ತದೆ. ಅಕ್ಷಯ ಪಾತ್ರಾ ಪ್ರತಿಷ್ಠಾನವು ಈಗಾಗಲೇ ಅನುಮತಿ ಪಡೆದುಕೊಂಡಿದೆ. ಅವರ ಕೋರಿಕೆಯಂತೆ ನಾವು ಅವರ ಬಿಸಿಯೂಟವನ್ನು ಪರೀಕ್ಷಿಸಿದ್ದು, ಅದರಲ್ಲಿ ಅಗತ್ಯದ ಎಲ್ಲಾ ಪೌಷ್ಟಿಕಾಂಶಗಳು ಇವೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಡಾ.ಕೆ.ಜಿ.ಜಗದೀಶ್‌ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.‌

ADVERTISEMENT

‘ಪೌಷ್ಟಿಕಾಂಶ ಇಲ್ಲ ಎಂಬ ಕಾರಣಕ್ಕೆ ಹೊಸದಾಗಿ ಬಿಸಿಯೂಟದ ಪಟ್ಟಿ ಸಿದ್ಧಪಡಿಸಿದ್ದಲ್ಲ, ಬದಲಿಗೆ ಬಿಸಿಯೂಟದ ಏಕತಾನತೆಯನ್ನು ನಿವಾರಿಸಲು ಹೀಗೆ ಮಾಡಲಾಗಿತ್ತು’ ಎಂದು ಅವರು ಹೇಳಿದರು.

ನವೆಂಬರ್‌ 2ರಿಂದ ಈ ಹೊಸ ಕ್ರಮದಂತೆ ಬಿಸಿಯೂಟವನ್ನು ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ ನೀಡಲಾಗುತ್ತಿದೆ.

ಅಕ್ಷಯ ಪಾತ್ರಾ ಸಿದ್ಧಪಡಿಸುವ ಬಿಸಿಯೂಟದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಇಲ್ಲದ್ದಕ್ಕೆ ಈ ಹಿಂದೆಯೂ ಆಕ್ಷೇಪ ಕೇಳಿಬಂದಿತ್ತು. ಕಳೆದ ವರ್ಷ ಇದೇ ವಿವಾದ ಎದ್ದಿದ್ದಾಗ ಅಕ್ಷಯ ಪಾತ್ರಾವು ಈರುಳ್ಳಿ, ಬೆಳ್ಳುಳ್ಳಿ ಸೇರಿಸಲು ನಿರಾಕರಿಸಿತ್ತು. ಸರ್ಕಾರ ನೋಟಿಸ್ ನೀಡಿದ್ದಕ್ಕೆ ಪ್ರತಿಷ್ಠಾನವು ಮಣಿದಿರಲಿಲ್ಲ. ಆದರೆ ಅಪಾರ ಸಂಖ್ಯೆಯಲ್ಲಿ (1.83 ಲಕ್ಷ) ಮಕ್ಕಳಿಗೆ ಬಿಸಿಯೂಟ ಪೂರೈಸುವ ವ್ಯವಸ್ಥೆ ಬೇರೆ ಇಲ್ಲವಾದ ಕಾರಣ ಸರ್ಕಾರ ಮತ್ತೆ ಪ್ರತಿಷ್ಠಾನ ನೀಡುವ ಆಹಾರವನ್ನೇ ಒಪ್ಪಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.