ADVERTISEMENT

ಕೊರೊನಾ ಯೋಧರಿಗೆ ಹತ್ತು ತಿಂಗಳಿಂದ ಗೌರವಧನವಿಲ್ಲ !

ಶಿವಕೋಟೆ ಮತ್ತು ಸೊಣೇನಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪರದಾಟ

ನಿರ್ವಾಣ ಸಿದ್ದಯ್ಯ
Published 23 ಜೂನ್ 2020, 5:25 IST
Last Updated 23 ಜೂನ್ 2020, 5:25 IST
   

ಹೆಸರಘಟ್ಟ (ಬೆಂಗಳೂರು):ಶಿವಕೋಟೆ ಮತ್ತು ಸೊಣೇನಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಹತ್ತು ತಿಂಗಳುಗಳಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯು ಗೌರವಧನ ನೀಡಿಲ್ಲ ಎಂದು ಕಾರ್ಯಕರ್ತೆಯರು ಅಳಲು ತೋಡಿಕೊಂಡಿದ್ದಾರೆ.

‘ಮತ್ಕೂರು, ಕೊಲುವರಾಯಹಳ್ಳಿ, ಹಾರೋಹಳ್ಳಿ ಪಾಳ್ಯ, ಕಾಕೋಳು, ಬೈರಾಪುರ, ಅರಕೆರೆ, ಬ್ಯಾತ, ಸೀತಕೆಂಪನಹಳ್ಳಿ, ಬುಡವನಹಳ್ಳಿ ಗ್ರಾಮಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕಿಯರು ಮತ್ತು ಸಹಾಯಕರಿಗೆ ಕಳೆದ ಹತ್ತು ತಿಂಗಳಿನಿಂದ ಗೌರವ ಸಂಭಾವನೆಯನ್ನು ನೀಡಿಲ್ಲ. ಈ ಬಗ್ಗೆ ಇಲಾಖೆಯ ಅಧಿಕಾರಿಗಳನ್ನು ಕೇಳಿದರೆ ಏನೇನೋ ಸಬೂಬು ಹೇಳಿ ಕಳುಹಿಸುತ್ತಿದ್ದಾರೆ’ ಎಂದು ಕಾರ್ಯಕರ್ತೆಯೊಬ್ಬರು ದೂರಿದರು.

‘ಕೊರೊನಾ ಸೋಂಕಿನ ವಿರುದ್ಧ ನಾವೂ ಕೆಲಸ ಮಾಡುತ್ತಿದ್ದೇವೆ. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಕಾರ್ಯದಲ್ಲಿ ಭಾಗಿಯಾಗುತ್ತಿದ್ದೇವೆ. ಆದರೂ ನಮಗೆ ಹತ್ತು ತಿಂಗಳಿಂದ ವೇತನ ನೀಡಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಗರ್ಭಿಣಿಯರಿಗೆ ಮೊಟ್ಟೆಯನ್ನು ನೀಡುತ್ತಿದ್ದೇವೆ. ಅದರ ಬಿಲ್ ಕೂಡ ನಮಗೆ ಪಾವತಿಸಿಲ್ಲ. ಕೈಯಿಂದ ದುಡ್ಡು ಹಾಕಿ ಮೊಟ್ಟೆಯನ್ನು ಕೊಟ್ಟಿದ್ದೇವೆ. ಹತ್ತು ತಿಂಗಳಿನಿಂದ ಕೈಯಿಂದಲೇ ಖರ್ಚು ಮಾಡುತ್ತಿದ್ದೇವೆ. ಕುಡಿಯುವ ನೀರಿಗೂ ನಾವೇ ದುಡ್ಡು ಕೊಡುತ್ತಿದ್ದೇವೆ’ ಎಂದು ಅಂಗನವಾಡಿ ಶಿಕ್ಷಕಿಯೊಬ್ಬರು ಹೇಳಿದರು.

‘ಮನೆ ಬಾಡಿಗೆ ಕಟ್ಟುವುದಕ್ಕೂ ಕಷ್ಟವಾಗಿದೆ. ಒಂದೆರಡು ತಿಂಗಳಾದರೆ ಹೇಗೋ ನಿಭಾಯಿಸಬಹುದು. ಆದರೆ ಹತ್ತು ತಿಂಗಳುಗಳಿಂದ ವೇತನವಿಲ್ಲದೆ ನಲುಗಿ ಹೋಗಿದ್ದೇವೆ. ನಮ್ಮ ಕಷ್ಟಗಳನ್ನು ಮೇಲಧಿಕಾರಿಗಳು ಅರ್ಥ ಮಾಡಿಕೊಳ್ಳುತ್ತಿಲ್ಲ’ ಕಾರ್ಯಕರ್ತೆಯೊಬ್ಬರು ಕಣ್ಣೀರು ಹಾಕಿದರು.

ಯಲಹಂಕದ ಸಿಡಿಪಿಓ ಎನ್.ಎನ್. ವಿಜಯ್ ಕುಮಾರ್ ಪ್ರತಿಕ್ರಿಯಿಸಿ ‘ಈ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು ನನ್ನ ಬಳಿ ಸಮಸ್ಯೆ ಹೇಳಿಕೊಂಡಿದ್ದಾರೆ. ನಾನು ಬಂದು ಕೇವಲ ಹದಿನೈದು ದಿನಗಳಾಗಿವೆ. ಒಂದು ವಾರದೊಳಗೆ ಗೌರವ ಸಂಭಾವನೆ ಪಾವತಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.