ADVERTISEMENT

ರಸ್ತೆ ಅಗೆಯಲು ಅನುಮತಿ ಇಲ್ಲ: ಬಿಬಿಎಂಪಿ

ಬಿಡಬ್ಲ್ಯೂಎಸ್‌ಎಸ್‌ಬಿ, ಬೆಸ್ಕಾಂಗೆ ಸೂಚನೆ: ಎಂಜಿನಿಯರ್‌ಗಳಿಗೆ ಹೊಣೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 16:32 IST
Last Updated 27 ಜನವರಿ 2023, 16:32 IST

ಬೆಂಗಳೂರು: ನಗರದಲ್ಲಿ ಡಾಂಬರು ಹಾಕಿದ ಮೇಲೆ ರಸ್ತೆ ಅಗೆಯಲು ಯಾವುದೇ ಇಲಾಖೆಗೆ ಅನುಮತಿ ನೀಡಲಾಗುವುದಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದರು.

ಬೃಹತ್‌ ಪ್ರಮಾಣದಲ್ಲಿ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಹೀಗಾಗಿ, ಯಾವುದೇ ಇಲಾಖೆಗಳು ರಸ್ತೆ ಅಗೆಯಬೇಕಾದರೆ ಡಾಂಬರಿಗೆ ಮೊದಲೇ ಈ ಕಾಮಗಾರಿಗಳನ್ನು ಕೈಗೊಳ್ಳಬೇಕು. ರಸ್ತೆ ಡಾಂಬರು ಆದಮೇಲೆ ಯಾರಿಗೂ ಅಗೆಯಲು ಅನುಮತಿ ನೀಡುವುದಿಲ್ಲ ಎಂದು ಹೇಳಿದರು.

ಬಿಡಬ್ಲ್ಯೂಎಸ್‌ಎಸ್‌ಬಿ, ಬೆಸ್ಕಾಂ ಸೇರಿ ಎಲ್ಲ ಇಲಾಖೆಗಳು ರಸ್ತೆಗಳಲ್ಲಿ ಅಗೆಯಬೇಕಾದರೆ ಅನುಮತಿ ಪಡೆಯಬೇಕು. ಡಾಂಬರು ಹಾಕಿದ ಮೇಲೆ ಅವರಿಗೆ ಅನುಮತಿ ನೀಡುವುದಿಲ್ಲ. ಹಾಗೇನಾದರೂ ಅಗೆದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಅಷ್ಟೇ ಅಲ್ಲ, ಅವರೇ ಪೂರ್ಣ ರಸ್ತೆಗೆ ಡಾಂಬರು ಹಾಕಬೇಕು ಎಂದರು.

ADVERTISEMENT

ರಸ್ತೆಗಳ ಅಭಿವೃದ್ಧಿ ಕಾಮಗಾರಿ ನಡೆಸುತ್ತಿರುವ ಬಗ್ಗೆ ಎಲ್ಲ ಇಲಾಖೆಗೂ ಸಂಬಂಧಪಟ್ಟ ಎಂಜಿನಿಯರ್‌ಗಳು ಮೊದಲೇ ಮಾಹಿತಿ ನೀಡಬೇಕು. ಅನ್ಯ ಇಲಾಖೆಗಳವರು ಮೊದಲೇ ಕಾಮಗಾರಿ ಮುಗಿಸುವಂತೆ ನೋಡಿಕೊಳ್ಳಬೇಕು. ಎಇಇ, ಇಇಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಎಲ್ಲರ ಮೇಲೂ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

‘ಮನೆಗಳಿಗೆ ನೀರು, ಒಳಚರಂಡಿ, ವಿದ್ಯುತ್ ಸಂಪರ್ಕ ಪಡೆಯುವಾಗ ಅವರು ಶುಲ್ಕ ಪಾವತಿಸಿರುತ್ತಾರೆ. ಅಂತಹ ಪ್ರಕರಣಗಳಲ್ಲಿ ನಾವೇ ಅದನ್ನು ದುರಸ್ತಿ ಮಾಡುತ್ತೇವೆ’ ಎಂದರು.

ಹೊಸದಾಗಿ ರಸ್ತೆಯನ್ನು ನಿರ್ಮಾಣ ಮಾಡುತ್ತಿರುವ ಸ್ಥಳಗಳಲ್ಲಿ ಮಾತ್ರ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲು ಅವಕಾಶ ಇದೆ. ಆದರೆ, ಈಗಾಗಲೇ ಕಾಮಗಾರಿ ಮುಗಿದು ಮರು ಅಭಿವೃದ್ಧಿ ಆಗಿದ್ದರೆ ಅಲ್ಲಿ ರಸ್ತೆ ಅಗೆಯಲು ಇಲಾಖೆಗಳಿಗೆ ಅನುಮತಿ ಇಲ್ಲ ಎಂದರು.

‘ಸ್ವಾತಂತ್ರ್ಯ ಉದ್ಯಾನದ ಬಳಿಯ ಪಾರ್ಕಿಂಗ್‌ ಸೌಲಭ್ಯ ಆರಂಭಿಸಲು ವೆಚ್ಚ ಹೆಚ್ಚಿರುವುದರಿಂದ ಟೆಂಡರ್‌ಗೆ ಯಾರೂ ಬರುತ್ತಿಲ್ಲ. ಡಿಯುಎಲ್‌ಟಿ ಅವರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಕಡಿಮೆ ಮಾಡಿ ಅದನ್ನು ಆಚರಣೆಗೆ ತರಲಾಗುತ್ತದೆ. ಜೆ.ಸಿ. ರಸ್ತೆಯಲ್ಲಿರುವ ಬಹು ಅಂತಸ್ತಿನ ಪಾರ್ಕಿಂಗ್‌ಗೆ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಸುಮಾರು ₹75 ಲಕ್ಷ ಆದಾಯ ಬರಲಿದೆ ಎಂದು ಹೇಳಿದರು.

ಏರೋ ಇಂಡಿಯಾ: ಮಾಂಸಾಹಾರ ನಿರ್ಬಂಧ

ನಗರದಲ್ಲಿ ನಡೆಯುವ ಏರೋ ಇಂಡಿಯಾ ವೈಮಾನಿಕ ವಸ್ತು ಪ್ರದರ್ಶನದ ಹಿನ್ನೆಲೆಯಲ್ಲಿ ಯಲಹಂಕ ವಾಯುನೆಲೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾಂಸ–ಮಾಂಸಾಹಾರ ಮಾರಾಟ ನಿರ್ಬಂಧಿಸಲಾಗಿದೆ. ಹೋಟೆಲ್‌, ಢಾಬಾಗಳಲ್ಲಿ ಮಾಂಸಾಹಾರ ತಯಾರಿಸುವಂತಿಲ್ಲ. ಜ.30ರಿಂದ ಫೆ.20ರವರೆಗೆ ಇದು ಅನ್ವಯವಾಗಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದರು.

‘ಏರೋ ಇಂಡಿಯಾಗೆ’ ಸಂಬಂಧಿಸಿದಂತೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುತ್ತಿದೆ. ಶುಚಿತ್ವದ ಬಗ್ಗೆ ಹೆಚ್ಚು ನಿಗಾವಹಿಸಲಾಗಿದೆ. ಈ ಬಾರಿ 258 ಇ–ಶೌಚಾಲಯಗಳನ್ನು ಸ್ಥಾಪಿಸಲಾಗುತ್ತಿದೆ. ಯಲಹಂಕ ವಾಯುನೆಲೆಯ ಸುತ್ತಮುತ್ತಲಿನ ಎಲ್ಲ ಕೆರೆಗಳಲ್ಲಿ ಮೀನುಗಾರಿಕೆಯನ್ನು ಸ್ಥಗಿತಗೊಳಿಸಲಾಗುತ್ತದೆ’ ಎಂದರು.

‘ಲ್ಯಾಂಡ್‌ ಫಿಲ್‌ಗಳಲ್ಲಿ ರಾತ್ರಿ ಮಾತ್ರ ಕೆಲಸ ಮಾಡಿ ಮೇಲ್ಭಾಗದಲ್ಲಿ ಮಣ್ಣು ಹಾಕಿ ಮುಚ್ಚಲಾಗುತ್ತದೆ. ನಮ್ಮ ಯಲಹಂಕ ವಲಯದ ವತಿಯಿಂದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.