ADVERTISEMENT

ಬೆಂಗಳೂರು | ವಿದ್ಯುತ್ ಸಮಸ್ಯೆ: ಕತ್ತಲಲ್ಲಿ ಕೆಂಪೇಗೌಡ ಬಡಾವಣೆ

ಮೂಲ ಸೌಲಭ್ಯ ಒದಗಿಸಲು ಬಿಡಿಎಗೆ ಹಲವು ಬಾರಿ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ– ದೂರು

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2024, 0:48 IST
Last Updated 31 ಡಿಸೆಂಬರ್ 2024, 0:48 IST
ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಅಳವಡಿಸಿರುವ ವಿದ್ಯುತ್ ಸಂಪರ್ಕ ಕಲ್ಪಿಸದ ಟ್ರಾನ್ಸ್‌ಫಾರ್ಮರ್‌ ಮತ್ತು ಬೀದಿ ದೀಪಗಳ ಕಂಬಗಳು
ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಅಳವಡಿಸಿರುವ ವಿದ್ಯುತ್ ಸಂಪರ್ಕ ಕಲ್ಪಿಸದ ಟ್ರಾನ್ಸ್‌ಫಾರ್ಮರ್‌ ಮತ್ತು ಬೀದಿ ದೀಪಗಳ ಕಂಬಗಳು   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ (ಎನ್‌ಕೆಪಿಎಲ್‌) ಸರಿಯಾದ ವಿದ್ಯುತ್ ಸಂಪರ್ಕ ಇಲ್ಲದೇ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ.

ಬಡಾವಣೆಯಲ್ಲಿ ಒಂಬತ್ತು ಬ್ಲಾಕ್‌ಗಳಿದ್ದು, ಸುಮಾರು 29 ಸಾವಿರ ನಿವೇಶನಗಳಿವೆ. ಆದರೆ, ಸಮಪರ್ಕವಾದ ವಿದ್ಯುತ್‌, ನೀರು, ರಸ್ತೆ ವ್ಯವಸ್ಥೆ ಇಲ್ಲದ ಕಾರಣ ಸುಮಾರು 70 ಕುಟುಂಬಗಳಷ್ಟೇ ಮನೆ ನಿರ್ಮಿಸಿಕೊಂಡಿವೆ.

ಬಡಾವಣೆಯಲ್ಲಿ ಐದು ವಿದ್ಯುತ್ ಉಪಕೇಂದ್ರಗಳನ್ನು ನಿರ್ಮಿಸಲು ಯೋಜಿಸಲಾಗಿತ್ತು. ಒಂದು ಉಪಕೇಂದ್ರವೂ ಆರಂಭವಾಗಿಲ್ಲ. ಕೊಮ್ಮಘಟ್ಟ ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ ಅನುಮತಿ ಸಿಕ್ಕಿತ್ತು. ಈ ಉಪಕೇಂದ್ರ ನಿರ್ಮಾಣ ಕಾಮಗಾರಿ ಎರಡೂವರೆ ವರ್ಷಗಳಿಂದ ನಡೆಯುತ್ತಲೇ ಇದೆ. ಆದರೆ, ವಿದ್ಯುತ್‌ ಪೂರೈಕೆ ಇನ್ನೂ ಆರಂಭವಾಗಿಲ್ಲ. ಇದರಿಂದಾಗಿ ವಿದ್ಯುತ್ ಸರಬರಾಜು ಸಮಸ್ಯೆ ಉಂಟಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

‘ಮನೆ ನಿರ್ಮಾಣ ಪ್ರಾರಂಭಿಸಿರುವವರು ಹಾಗೂ ನಿವಾಸಿಗಳು ಸ್ವಂತ ವೆಚ್ಚದಲ್ಲಿ ಅಕ್ಕಪಕ್ಕದ ಹಳ್ಳಿಗಳು, ಖಾಸಗಿ ಬಡಾವಣೆಗಳ ವಿದ್ಯುತ್ ಕಂಬಗಳ ಮೂಲಕ ವಿದ್ಯುತ್ ಸಂಪರ್ಕವನ್ನು ಪಡೆಯಬೇಕಾಗಿದೆ. ಇದಕ್ಕಾಗಿ ಹೆಚ್ಚುವರಿ ಹಣ ಪಾವತಿಸಬೇಕಾಗಿದೆ’ ಎಂದು ‘ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆ’ಯ ಜಂಟಿ ಕಾರ್ಯದರ್ಶಿ ಸೂರ್ಯಕಿರಣ್‌ ಹೇಳಿದ್ದಾರೆ.

‘ಬಡಾವಣೆಗೆ ವಿದ್ಯುತ್ ಸೇರಿದಂತೆ ಮೂಲ ಸೌಲಭ್ಯ ಒದಗಿಸುವಂತೆ ಬಿಡಿಎಗೆ ಹಲವು ಬಾರಿ ಅರ್ಜಿ ನೀಡಿ, ತಿಂಗಳುಗಟ್ಟಲೆ ಅಲೆದರೂ ಪ್ರಯೋಜನವಾಗಿಲ್ಲ. ಬಡಾವಣೆಯಲ್ಲಿ ಎಲ್ಲ ರಸ್ತೆಗಳಲ್ಲಿ ಬೀದಿ ದೀಪಗಳು ಇಲ್ಲ. ನಿವಾಸಿಗಳು ಕತ್ತಲಲ್ಲೇ ಓಡಾಡುವಂತಾಗಿದೆ. ಕಟ್ಟಡ ನಿರ್ಮಾಣ ಸಾಮಗ್ರಿಗಳ ಕಳ್ಳತನವಾಗುತ್ತಿವೆ. ಅಕ್ರಮ ಚಟುವಟಿಕೆಗಳನ್ನು ತಪ್ಪಿಸಲು ಭದ್ರತಾ ಸಿಬ್ಬಂದಿ ನಿಯೋಜಿಸಲು ಸೂಕ್ತ ವ್ಯವಸ್ಥೆ ಮಾಡಬೇಕಿದೆ’ ಎಂದು ಮನವಿ ಮಾಡಿದ್ದಾರೆ.

‘ಮನೆ ನಿರ್ಮಾಣ ಪ್ರಾರಂಭಿಸಿರುವ ನಿವೇಶನದಾರರು, ಬಿಡಿಎ ಮತ್ತು ಬೆಸ್ಕಾಂ ನಡುವಿನ ಸಮನ್ವಯ ಕೊರತೆಯಿಂದಾಗಿ ವಿದ್ಯುತ್ ಸಂಪರ್ಕ ಪಡೆಯುವ ಪ್ರಕ್ರಿಯೆಯಲ್ಲಿ ಹಲವು ತೊಂದರೆಗಳನ್ನು ಎದುರಿಸಬೇಕಾಗುತ್ತಿದೆ’ ಎಂದು ಹೇಳಿದ್ದಾರೆ.

ಬಡಾವಣೆಯಲ್ಲಿ ವಿದ್ಯುತ್ ಜಾಲ ನಿರ್ಮಾಣ ಆಗದಿರುವುದರಿಂದ ಬೀದಿ ದೀಪಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿಲ್ಲ. ಮನೆಗಳ ನಿರ್ಮಾಣದ ನಂತರ ದೀಪದ ವ್ಯವಸ್ಥೆ ಮಾಡಲಾಗುವುದು ಎಂದು ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ ಎಂದು ನಿವಾಸಿಗಳು ವಿವರಿಸುತ್ತಾರೆ.

‘ಪ್ರಾಧಿಕಾರವು ಬಡಾವಣೆಯ ಒಂಬತ್ತು ಬ್ಲಾಕ್‌‌ಗಳಿಗೆ ಬಹು ಮುಖ್ಯವಾದ ವಿದ್ಯುತ್ ಜಾಲವನ್ನೇ (ಮೇನ್‌ ಲೈನ್) ನಿರ್ಮಿಸಿಲ್ಲ. ಯೋಜಿತ ಐದು ಬ್ಲಾಕ್‌ಗಳಲ್ಲಿ ವಿದ್ಯುತ್ ಉಪ ಕೇಂದ್ರದ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಹೀಗಾಗಿ ಬಡಾವಣೆ ಜನರು ಕತ್ತಲಲ್ಲೇ ಇರುವಂತಾಗಿದೆ’ ಎಂದು ಸೂರ್ಯಕಿರಣ್ ಬೇಸರ ವ್ಯಕ್ತಪಡಿಸಿದ್ದಾರೆ.

ವಿದ್ಯುತ್‌ ಪೂರೈಸಲು ಬೆಸ್ಕಾಂಗೆ ಬಿಡಿಎ ₹59 ಕೋಟಿ ಪಾವತಿಸಿದರೂ, ವಿದ್ಯುತ್ ಜಾಲವಿಲ್ಲದ ಕಾರಣದಿಂದ ವಿದ್ಯುತ್‌ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಬಡಾವಣೆಯಲ್ಲಿ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದು ಮನೆ ನಿರ್ಮಿಸಿಕೊಂಡಿರುವವರೂ, ರಸ್ತೆಗಳಲ್ಲಿ ಬೀದಿ ದೀಪಗಳಿಲ್ಲದೆ ಕತ್ತಲಲ್ಲೇ ಓಡಾಡುವಂತಾಗಿದೆ ಎಂದು ನಾಡಪ್ರಭು ಕೆಂಪೇಗೌಡ ಲೇಔಟ್ ಮುಕ್ತ ವೇದಿಕೆ ಕಾರ್ಯದರ್ಶಿ ಎಂ. ಅಶೋಕ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.