ADVERTISEMENT

ಮಾರಾಟ ಉತ್ತೇಜನ ಕ್ರಮಗಳಿಗೆ ಪಾಲಿಕೆ ಕಡಿವಾಣ

ಖರೀದಿದಾರರಿಗೆ ‘ಕೊಡುಗೆ’ ಕೊಡುವಂತಿಲ್ಲ, ಮಾರಾಟ ಮೇಳ ಏರ್ಪಡಿಸುವಂತಿಲ್ಲ– ಚಿಲ್ಲರೆ ಮಾರಾಟ ಮಳಿಗೆಗಳಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2021, 2:54 IST
Last Updated 15 ಜೂನ್ 2021, 2:54 IST

ಬೆಂಗಳೂರು: ಚಿಲ್ಲರೆ ಮಾರಾಟ ಮಳಿಗೆಗಳ ಬಳಿ ಜನಸಂದಣಿ ಉಂಟಾಗುವುದನ್ನು ತಡೆಯಲು ಕ್ರಮಕೈಗೊಳ್ಳುವಂತೆ ಬಿಬಿಎಂಪಿಯು ಇಂತಹ ಮಳಿಗೆಗಳ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಚಿಲ್ಲರೆ ಮಾರಾಟ ಮಳಿಗೆಗಳು ಉತ್ಪನ್ನಗಳ ಮಾರಾಟ ಉತ್ತೇಜನಕ್ಕಾಗಿ ವಿಶೇಷ ಕೊಡುಗೆಗಳನ್ನು ನೀಡುವಂತಿಲ್ಲ. ಮಾರಾಟ ಮೇಳಗಳನ್ನು ಹಮ್ಮಿಕೊಳ್ಳುವಂತಿಲ್ಲ.

ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಮಾರ್ಗಸೂಚಿ ಪ್ರಕಟಿಸಿದ್ದಾರೆ. ಅದರ ಪ್ರಮುಖ ಅಂಶಗಳು ಇಂತಿವೆ.

* ಮಳಿಗೆಗಳ ಬಳಿ ಜನಜಂಗುಳಿ ಸೇರಲು ಕಾರಣವಂತಹ ‘ಕೊಡುಗೆ’ಗಳನ್ನು ನೀಡಬಾರದು.

ADVERTISEMENT

* ನಿರ್ದಿಷ್ಟ ಕಾಲಮಿತಿಯಯೊಳಗೆ ಬಳಸಬಹುದಾದ ಟೋಕನ್‌ಗಳನ್ನು ನೀಡುವ ಮೂಲಕ ಮಳಿಗೆಯಲ್ಲಿ ಗ್ರಾಹಕರ ದಟ್ಟಣೆ ಉಂಟಾಗುವುದನ್ನು ತಡೆಯಬಹುದು. ನಿರ್ಬಂಧದ ಆದೇಶ ಜಾರಿಯಲ್ಲಿದ್ದರೂ ಜನರಿಗೆ ಅವಶ್ಯಕ ಸಾಮಗ್ರಿ ಸಿಗಬೇಕು ಎಂಬ ಕಾರಣಕ್ಕೆ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.

* ಗ್ರಾಹಕರ ಬಳಕೆಗಾಗಿ ಸ್ಯಾನಿಟೈಸರ್‌ಗಳನ್ನು ಮಳಿಗೆಗಳಲ್ಲಿ ಒದಗಿಸಬೇಕು.

* ಮಳಿಗೆಯಲ್ಲಿ ಗ್ರಾಹಕರು ಕೈಯಿಂದ ಮುಟ್ಟುವಂತಹ ರೇಲಿಂಗ್‌, ಬಾಗಿಲ ಕೈಹಿಡಿ, ನೆಲ, ಬಿಲ್ಲಿಂಗ್‌ ಕೌಂಟರ್‌ಗಳ ಮೇಲ್ಮೈ ಮುಂತಾದ ಸ್ಥಳಗಳನ್ನು ಸೋಡಿಯಂ ಹೈಪೋಕ್ಲೋರೈಟ್‌ನಿಂದ ಅಥವಾ ಬ್ಲೀಚಿಂಗ್ ಪೌಡರ್‌ನಿಂದ ತಯಾರಿಸಿದ ದ್ರಾವಣದಿಂದ ಆಗಾಗ ಸ್ವಚ್ಛಗೊಳಿಸಬೇಕು.

* ಸಿಬ್ಬಂದಿಯೂ ವೈಯಕ್ತಿಕ ಸ್ವಚ್ಛತೆಗೆ ಗಮನ ಹರಿಸಬೇಕು. ಸಿಬ್ಬಂದಿಗಳೆಲ್ಲರಿಗೂ ಕೋವಿಡ್ ಲಸಿಕೆ ನೀಡಬೇಕು. ಸೋಂಕಿನ ಲಕ್ಷಣಗಳಿರುವ ಹಾಗೂ ಉಸಿರಾಟದ ಸಮಸ್ಯೆ ಹೊಂದಿರುವ ಸಿಬ್ಬಂದಿಗೆ ಅಸೌಖ್ಯದ ರಜೆ ಮಂಜೂರು ಮಾಡಿ ಚಿಕಿತ್ಸೆ ಪಡೆಯುವಂತೆ ಸೂಚಿಸಬೇಕು.

* ಗ್ರಾಹಕರು ಉತ್ಪನ್ನಗಳನ್ನು ಮುಟ್ಟುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು. ಉತ್ಪನ್ನ ತೆಗೆದುಕೊಡಲು ಸಿಬ್ಬಂದಿಯನ್ನು ನಿಯೋಜಿಸಬೇಕು.

* ಬಿಲ್ಲಿಂಗ್‌ ಕೌಂಟರ್‌ನಲ್ಲಿ ಗ್ರಾಹಕರ ದಟ್ಟಣೆ ಕಡಿಮೆಗೊಳಿಸಲು, ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಬೇಕು. ವಾರಾಂತ್ಯದಲ್ಲಿ ಹೆಚ್ಚುವರಿ ಕೌಂಟರ್‌ಗಳನ್ನು ವ್ಯವಸ್ಥೆ ಮಾಡಬೇಕು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.