
ಕಡತ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ‘ನಗರದ ಸರ್ಕಾರಿ ಆರ್‌ಸಿ ಕಾಲೇಜು ಹಾಗೂ ಕಲಾ ಕಾಲೇಜು ಅನ್ನು ಮನಮೋಹನಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಘಟಕ ಕಾಲೇಜುಗಳನ್ನಾಗಿ ಪರಿವರ್ತನೆ ಮಾಡುವ ಪ್ರಸ್ತಾವನೆ ಕೈ ಬಿಡಿ’ ಎಂದು ಕರ್ನಾಟಕ ರಾಜ್ಯ ದಲಿತ ಪದವೀಧರರ ಸಂಘ ಆಗ್ರಹಿಸಿದೆ.
‘ಸಂಪೂರ್ಣ ಸರ್ಕಾರಿ ಕಾಲೇಜುಗಳಾಗಿರುವ ಇಲ್ಲಿ 10 ಸಾವಿರದಷ್ಟು ವಿದ್ಯಾರ್ಥಿಗಳು ಪದವಿ, ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ. ಅದರಲ್ಲೂ ಗ್ರಾಮೀಣ ಪ್ರದೇಶದ ಬಡವರು, ಕೂಲಿ ಕಾರ್ಮಿಕರ ಮಕ್ಕಳು ಶಿಕ್ಷಣ ಪಡೆಯಲು ಈ ಕಾಲೇಜುಗಳು ಆಸರೆಯಾಗಿವೆ. ಹಿಂದುಳಿದ, ಪರಿಶಿಷ್ಟ ಜಾತಿ, ಪಂಗಡ ಹಾಗೂ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳೇ ಅಧಿಕವಾಗಿದ್ದು, ಪರಿವರ್ತನೆಯಿಂದ ಶುಲ್ಕ ಹೊರೆಯಾಗಲಿದೆ ’ ಎಂದು ಸಂಘದ ಅಧ್ಯಕ್ಷ ವಿ.ಲೋಕೇಶ್ ತಿಳಿಸಿದ್ದಾರೆ.
‘ಈ ಹಿಂದೆಯೇ ಪರಿವರ್ತನೆ ವಿರೋಧಿಸಿ ಹೋರಾಟ ನಡೆಸಿದಾಗ ಮೂವರು ಸದಸ್ಯರ ಸಮಿತಿ ರಚಿಸಲಾಗಿತ್ತು. ಸಮಿತಿಯು ವರದಿ ನೀಡಿ ಸಾಧಕ ಬಾಧಕಗಳ ಬಗ್ಗೆ ತಿಳಿಸಿದೆ. ಈಗ ಕೆಲವು ಅಧ್ಯಾಪಕರು ವಿಶ್ವವಿದ್ಯಾಲಯದ ಘಟಕ ಕಾಲೇಜು ಆದರೆ ಎರಡು ವರ್ಷ ಹೆಚ್ಚುವರಿ ಸೇವೆ ಸಿಗಲಿದೆ ಎನ್ನುವ ಕಾರಣದಿಂದ ಇದಕ್ಕೆ ಒತ್ತಡ ಹೇರುತ್ತಿದ್ದಾರೆ. ಈಗಾಗಲೇ ವಿಶ್ವವಿದ್ಯಾಲಯದ ಕುಲಸಚಿವರು ಇದೇ ವಿಚಾರವಾಗಿ ವಿವರಣೆ ಕೇಳಿದ್ದಾರೆ. ಈ ಪ್ರಸ್ತಾವ ಕೈ ಬಿಡದೇ ಇದ್ದರೆ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.