ADVERTISEMENT

ಶಬ್ದ ಮಾಲಿನ್ಯ ಉಪಕರಣ ಖರೀದಿ ಆದೇಶ ಪಾಲನೆಗೆ ವಿಳಂಬ: ಹೈಕೋರ್ಟ್‌ ಅತೃಪ್ತಿ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2019, 20:15 IST
Last Updated 30 ಆಗಸ್ಟ್ 2019, 20:15 IST
   

ಬೆಂಗಳೂರು: ಶಬ್ದ ಮಾಲಿನ್ಯ ಉಪಕರಣಗಳ ಖರೀದಿ ಮಾಡುವಂತೆ ಕೋರ್ಟ್‌ ನೀಡಿದ್ದ ಆದೇಶ ಪಾಲಿಸದೇ ಇರುವ ಸರಕಾರದ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಈ ಕುರಿತಂತೆ ಇಂದಿರಾನಗರ ನಿವಾಸಿಗಳ ಸಂಘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಮಾಲಿನ್ಯ ನಿಯಂತ್ರಣಕ್ಕೆ ನಿಶ್ಯಬ್ದ ವಲಯಗಳ ರಚನೆ ಮಾಡುವಂತೆ ನಿರ್ದೇಶಿಸಿದ್ದರೂ ಅದನ್ನು ಪಾಲಿಸಿಲ್ಲ. ಈ ಬಗ್ಗೆ ಅಡ್ವೊಕೇಟ್‌ ಜನರಲ್‌ ಅವರೇ ಖುದ್ದು ಹಾಜರಾಗಿ ವಿವರಣೆ ನೀಡಲಿ ಎಂದು ವಿಚಾರಣೆಯನ್ನು ಸೆಪ್ಟೆಂಬರ್ 1ಕ್ಕೆ ಮುಂದೂಡಿದೆ.

ADVERTISEMENT

‘ಇಂದಿರಾ ನಗರದಲ್ಲಿ ಪಬ್ ಮತ್ತು ಬಾರ್‌ಗಳಿಂದ ಆಗುತ್ತಿರುವ ಶಬ್ದ ಮಾಲಿನ್ಯ ತಡೆಗೆ ನಡೆಸುತ್ತಿರುವ ತಪಾಸಣೆ ಮುಂದುವರಿಸಬೇಕು‘ ಎಂದೂ ನ್ಯಾಯಪೀಠ ಸೂಚಿಸಿದೆ.

ಕೆರೆ ಮಧ್ಯದಲ್ಲಿನ ಕಾಮಗಾರಿಗೆ ತಡೆ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ ಬೇಗೂರು ಕೆರೆಯಲ್ಲಿ ಕೃತಕ ದ್ವೀಪ ನಿರ್ಮಾಣ ಕಾರ್ಯ ಕೈಗೊಂಡಿರುವುದಕ್ಕೆ ಹೈಕೋರ್ಟ್ ಚಾಟಿ ಬೀಸಿದೆ.

ಈ ಕುರಿತಂತೆ ಸಿಟಿಜನ್ ಆಕ್ಷನ್ ಫೋರಂ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾ. ಅಭಯ್‌ ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

‘ಕೋರ್ಟ್‌ ಅನುಮತಿ ಇಲ್ಲದೆ ಕೆರೆಯೊಳಗೆ ಯಾವುದೇ ಸಿವಿಲ್ ಕಾಮಗಾರಿ ಕೈಗೊಳ್ಳಬಾರದು‘ ಎಂದು ಮಧ್ಯಂತರ ಆದೇಶ ನೀಡಿ, ವಿಚಾರಣೆಯನ್ನು ಸೆಪ್ಟೆಂಬರ್‌ 17ಕ್ಕೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.