ADVERTISEMENT

ಒಳ ಮೀಸಲಾತಿ: ಅಲೆಮಾರಿಗಳಿಂದ ಚಾವಟಿ ಏಟು

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 15:48 IST
Last Updated 25 ಆಗಸ್ಟ್ 2025, 15:48 IST
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಅಲೆಮಾರಿ ಸಮುದಾಯದವರು ಟೆಂಟ್‌ನಲ್ಲಿಯೇ ಅಹೋರಾತ್ರಿ ಧರಣಿ ನಡೆಸಿದರು
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಅಲೆಮಾರಿ ಸಮುದಾಯದವರು ಟೆಂಟ್‌ನಲ್ಲಿಯೇ ಅಹೋರಾತ್ರಿ ಧರಣಿ ನಡೆಸಿದರು   

ಬೆಂಗಳೂರು: ಪ್ರತ್ಯೇಕವಾಗಿ ಶೇಕಡ 1ರಷ್ಟು ಒಳ ಮೀಸಲಾತಿ ನೀಡುವಂತೆ ಆಗ್ರಹಿಸಿ ಅಲೆಮಾರಿ ಸಮುದಾಯಗಳು ನಡೆಸುತ್ತಿರುವ ಹೋರಾಟ ಮುಂದುವರಿದಿದೆ. ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಸಮುದಾಯದ ಕಲಾವಿದರು ಸೋಮವಾರ ಚಾವಟಿ ಏಟು ಬಾರಿಸಿಕೊಂಡರು.

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ‘ಪರಿಶಿಷ್ಟ ಜಾತಿಯ 59 ಸೂಕ್ಷ್ಮ, ಅತಿ ಸೂಕ್ಷ್ಮ ಅಲೆಮಾರಿ ಸಮುದಾಯಗಳ ಒಳ ಮೀಸಲಾತಿ ವಂಚಿತ ಹೋರಾಟ ಸಮಿತಿ’ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿಯಲ್ಲಿ ದಲಿತ ಸಂಘರ್ಷ ಸಮಿತಿ ಹಾಗೂ ಅರುಂತತಿಯಾರ್ ಸಮುದಾಯ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿವೆ. 

ಈ ಮಧ್ಯೆ ಆರ್ಥಿಕ ಸಮಸ್ಯೆಯಿಂದಾಗಿ ಧರಣಿ ಸ್ಥಳದಿಂದ ಶಾಮಿಯಾನ ತೆರವುಗೊಳಿಸಿದ್ದು, ಸಮುದಾಯದವರು ಟೆಂಟ್‌ನಲ್ಲಿಯೇ ಧರಣಿ ನಡೆಸುತ್ತಿದ್ದಾರೆ.

ADVERTISEMENT

ಶಿಳ್ಳೆಕ್ಯಾತ, ಜೋಗಿ ಮಸಣ, ಬಂಡಿ, ಮಾಲ ದಾಸರಿ, ಸುಡುಗಾಡು ಸಿದ್ದ, ಮುಕ್ರಿ ಸೇರಿದಂತೆ ವಿವಿಧ ಅಲೆಮಾರಿ ಸಮುದಾಯದ ಸದಸ್ಯರು ತಮ್ಮ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ, ಶಂಖ, ಜಾಗಟೆ, ತಂಬೂರಿ ಬಾರಿಸುವುದು ಮಾತ್ರವಲ್ಲದೇ, ಚಾವಟಿ ಏಟು ಬಾರಿಸಿಕೊಳ್ಳುವ ಮೂಲಕ ನ್ಯಾಯ ಒದಗಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

‘ಅಲೆಮಾರಿ ಸಮುದಾಯ ಇಂದಿಗೂ ತುತ್ತು ಅನ್ನಕ್ಕೆ ಪರದಾಡುತ್ತಿದ್ದು, ಜೀವನ ನಡೆಸುವುದೇ ಕಷ್ಟವಾಗಿದೆ. ನಿರ್ದಿಷ್ಟ ಊರು, ಮನೆ ಇಲ್ಲ. ಮತ್ತೊಬ್ಬರ ಜಮೀನುಗಳಲ್ಲಿ ಗುಡಿಸಲು ಹಾಕಿಕೊಂಡು ವಾಸಿಸುವಂತಹ ಪರಿಸ್ಥಿತಿ ಇದೆ. ಹಂದಿ ಸಾಕಣೆ, ಭಿಕ್ಷಾಟನೆ, ಕೂದಲು ಮಾರಾಟ ಕಸುಬಾಗಿದೆ. ಇಂತಹ ಅಲೆಮಾರಿ ಸಮುದಾಯಗಳು ಮೀಸಲಾತಿ ಪಡೆಯಲು ಹೇಗೆ ಸಾಧ್ಯ?‘ ಎಂದು ಪ್ರತಿಭಟನಕಾರರು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಅಲೆಮಾರಿ ಸಮುದಾಯದ ಮುಖಂಡರಾದ ಬಿ.ಎಲ್.ಹನುಮಂತಪ್ಪ, ಅಂಬಣ್ಣ ಅರೋಲಿಕರ್, ಸಣ್ಣ ಮಾರಪ್ಪ, ಚಾವಡೆ ಲೋಕೇಶ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.