ADVERTISEMENT

ಜಾನಪದಕ್ಕೆ ಉತ್ತರ ಕರ್ನಾಟಕವು ಸಮೃದ್ಧ ನೆಲೆ: ರಾಮೇಗೌಡ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 16:20 IST
Last Updated 17 ಆಗಸ್ಟ್ 2025, 16:20 IST
   

ಬೆಂಗಳೂರು: ‘ಜಾನಪದಕ್ಕೆ ಉತ್ತರ ಕರ್ನಾಟಕವು ಸಮೃದ್ಧ ನೆಲೆಯಾಗಿದೆ’ ಎಂದು ಬಿ.ಎಂ.ಶ್ರೀ. ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ ಅಭಿಪ್ರಾಯಪಟ್ಟರು. 

ಕಮತಗಿಯ ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ ಮತ್ತು ಕನ್ನಡ ಜಾನಪದ ಪರಿಷತ್ತಿನ ಶಾಂತಿನಗರ ವಿಧಾನಸಭಾ ಕ್ಷೇತ್ರ ಘಟಕ ಜಂಟಿಯಾಗಿ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಪ್ರಕಾಶ ಗ. ಖಾಡೆ ಅವರ ಜನಪದ ಲೇಖನಗಳನ್ನೊಳಗೊಂಡ ‘ಗ್ರಾಮ್ಯ’ ಗ್ರಂಥವನ್ನು ಜನಾರ್ಪಣೆ ಮಾಡಿ, ಮಾತನಾಡಿದರು. 

‘ಉತ್ತರ ಕರ್ನಾಟಕ ಭಾಗದ ಖಾಡೆ ಮನೆತನದ ಜಿ.ಬಿ.ಖಾಡೆ ಮತ್ತು ಅವರ ಪುತ್ರ ಪ್ರಕಾಶ ಖಾಡೆ ಅವರು ಕಳೆದ ಐದು ದಶಕಗಳಿಂದ ಜಾನಪದ ಸಾಹಿತ್ಯ ಸಂಗ್ರಹ, ಸಂಪಾದನೆ ಮತ್ತು ಸಂಶೋಧನೆಯಲ್ಲಿ ಮಾಡಿದ ಕೆಲಸ ದಾಖಲಾರ್ಹವಾಗಿದೆ. ಬಿಡುಗಡೆಯಾಗಿರುವ ಈ ಕೃತಿಯು ಹೊಸ ತೆಲೆಮಾರಿನ ಓದುಗರಲ್ಲಿ ಜಾನಪದದ ಅರ್ಥ ತಿಳಿವಳಿಕೆಯನ್ನು ಹೆಚ್ಚಿಸುತ್ತದೆ’ ಎಂದರು.

ADVERTISEMENT

ಲೇಖಕಿ ಶಾಂತಿ ವಾಸು ‘ಜಾನಪದ ಸಂಸ್ಕೃತಿಯ ತಾಯಿ ಬೇರುಗಳು ನಮ್ಮ ಪರಂಪರೆಯ ದೊಡ್ಡ ಆಸ್ತಿಯಾಗಿವೆ. ಅವುಗಳನ್ನು ಹೊಸ ದೃಷ್ಟಿಕೋನದಿಂದ ನೋಡುವ ಲೇಖನಗಳು ಖಾಡೆ ಅವರ ಕ್ಷೇತ್ರ ಕಾರ್ಯ ಮತ್ತು ಆಳವಾದ ಅಧ್ಯಯನದ ಪ್ರತೀಕ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಸಾಹಿತಿ ಎಂ.ವಿ.ಷಡಕ್ಷರಿ ಅವರು ಕೃತಿಯ ಬಗ್ಗೆ ಮಾತನಾಡಿದರು. ಕಮತಗಿಯ ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ರಮೇಶ ಕಮತಗಿ, ಪ್ರಾಧ್ಯಾಪಕ ರಾಮಲಿಂಗೇಶ್ವರ (ಸಿಸಿರಾ), ಕಾವ್ಯ ಸ್ಪಂದನದ ಪ್ರಕಾಶಕ ಭದ್ರಾವತಿ ರಾಮಾಚಾರಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.