ಸೇಂಟ್ ಜೋಸೆಫ್ ವಿಶ್ವವಿದ್ಯಾಲಯ
ಬೆಂಗಳೂರು: ಈಶಾನ್ಯ ರಾಜ್ಯಗಳ ಸಂಸ್ಕೃತಿಯನ್ನು ಸಾರುವ ಸಮ್ಮಿಲನೋತ್ಸವ ನ.9ರಂದು ಬೆಳಿಗ್ಗೆ 11ರಿಂದ ಶಾಂತಿನಗರದ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಸಮನ್ವಯಕಾರ ಅರುಣ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕ್ರಿಕೆಟ್ ಅನ್ನು ಹೊರತುಪಡಿಸಿ ಒಲಿಂಪಿಕ್ಸ್ ಸಹಿತ ಅನೇಕ ಕ್ರೀಡಾಕೂಟಗಳಲ್ಲಿ ದಾಖಲೆ ಮಾಡಿದವರು, ಪದಕ ಪಡೆದವರು ಬಹುತೇಕರು ಈಶಾನ್ಯ ರಾಜ್ಯದವರಾಗಿದ್ದಾರೆ. ಈಶಾನ್ಯ ಭಾರತದ ಎಂಟು ರಾಜ್ಯಗಳ ಸಂಸ್ಕೃತಿಯು ಭಿನ್ನವಾಗಿದೆ. ಅವುಗಳನ್ನು ಪ್ರದರ್ಶಿಸುವ ವೇದಿಕೆ ಸಮ್ಮಿಲನೋತ್ಸವ ಆಗಿದೆ’ ಎಂದು ಹೇಳಿದರು.
ಎಂಟು ರಾಜ್ಯಗಳ ಸಾಂಪ್ರದಾಯಿಕ ನೃತ್ಯಗಳು, ಗುಂಪು ಪ್ರದರ್ಶನಗಳು, ವೈವಿಧ್ಯಮಯ ಪಾಕ ಪದ್ಧತಿ ಪ್ರದರ್ಶಿಸುವ ಆಹಾರ ಮಳಿಗೆಗಳು, ವ್ಯಾಪಾರ ಮಳಿಗೆಗಳು, ಸಾಧಕರು ಮತ್ತು ಸಮುದಾಯದ ನಾಯಕರಿಗೆ ಸನ್ಮಾನ ಕಾರ್ಯಕ್ರಮ ಇರಲಿದೆ ಎಂದರು.
ಅಖಿಲ ಅರುಣಾಚಲ ವಿದ್ಯಾರ್ಥಿಗಳ ಒಕ್ಕೂಟ–ಕರ್ನಾಟಕ, ಅಸ್ಸಾಂ ಸೊಸೈಟಿ ಆಫ್ ಬೆಂಗಳೂರು, ಪೂರ್ವ ನಾಗಾ ವಿದ್ಯಾರ್ಥಿಗಳ ಒಕ್ಕೂಟ–ಬೆಂಗಳೂರು, ಜನಶಕ್ತಿ ಫೌಂಡೇಷನ್, ಮಣಿಪುರಿ ಡಯಾಸ್ಸೊರಾ– ಬೆಂಗಳೂರು, ನಾಗಾ ವಿದ್ಯಾರ್ಥಿಗಳ ಒಕ್ಕೂಟ, ತ್ರಿಪುರಾ ಪೀಪಲ್ ಫೌಂಡೇಷನ್ ಹಮ್ಮಿಕೊಂಡಿರುವ ಈ ಕಾರ್ಯಕ್ರಮವನ್ನು ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ತ್ರಿಪುರಾ ರಾಜಮನೆತನದ ಮುಖ್ಯಸ್ಥ ಪ್ರದ್ಯೋತ್ ಬಿಕ್ರಂ ಮಾಣಿಕ್ಯ ದೆಬ್ಬರ್ಮಾ, ಎನ್‌ಪಿಪಿ ರಾಷ್ಟ್ರೀಯ ಅಧ್ಯಕ್ಷ ಜೇಮ್ಸ್ ಪಿ.ಕೆ. ಸಂಗ್ಮಾ, ಶಾಸಕರಾದ ಸುರೇಶ್ ಬಾಬು, ಸತೀಶ್ ರೆಡ್ಡಿ ಎಂ. ಸಹಿತ ಅನೇಕರು ಭಾಗವಹಿಸಲಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.