ADVERTISEMENT

ಅಂಕವಲ್ಲ, ಮಾನವೀಯ ಮೌಲ್ಯ ಮುಖ್ಯ: ಸುಧಾ ಮೂರ್ತಿ

ಎನ್‌ಎಚ್‌ವಿಪಿ ಶಾಲೆಯ ಕಾರ್ಯಕ್ರಮದಲ್ಲಿ ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಸಲಹೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2022, 21:36 IST
Last Updated 2 ನವೆಂಬರ್ 2022, 21:36 IST
ಬನಶಂಕರಿಯ ನ್ಯಾಷನಲ್‌ ಹಿಲ್‌ ವ್ಯೂ ಪಬ್ಲಿಕ್‌ ಶಾಲೆಯಲ್ಲಿ ಮಾನವೀಯ ಮೌಲ್ಯಗಳ ಪ್ರಯೋಗಾಲಯಕ್ಕೆ ಇನ್ಫೊಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಬುಧವಾರ ಚಾಲನೆ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ಶಾಲೆಯ ಸದಸ್ಯ ಕಾರ್ಯದರ್ಶಿ ಐಶ್ವರ್ಯ ಡಿ.ಕೆ.ಎಸ್. ಹೆಗ್ಡೆ, ಡಾ. ಬಿಂದು ಹರಿ ಇದ್ದರು.
ಬನಶಂಕರಿಯ ನ್ಯಾಷನಲ್‌ ಹಿಲ್‌ ವ್ಯೂ ಪಬ್ಲಿಕ್‌ ಶಾಲೆಯಲ್ಲಿ ಮಾನವೀಯ ಮೌಲ್ಯಗಳ ಪ್ರಯೋಗಾಲಯಕ್ಕೆ ಇನ್ಫೊಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಬುಧವಾರ ಚಾಲನೆ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ಶಾಲೆಯ ಸದಸ್ಯ ಕಾರ್ಯದರ್ಶಿ ಐಶ್ವರ್ಯ ಡಿ.ಕೆ.ಎಸ್. ಹೆಗ್ಡೆ, ಡಾ. ಬಿಂದು ಹರಿ ಇದ್ದರು.   

ಬೆಂಗಳೂರು: ‘ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಗಳಿಸುವ ಅಂಕಕ್ಕೆ ಮಾತ್ರ ಪ್ರಾಮುಖ್ಯ ನೀಡಬಾರದು. ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿದರೆ ಅದು ಅವರ ಜೀವನಕ್ಕೆ ಆಧಾರವಾಗುತ್ತದೆ’ ಎಂದು ಇನ್ಫೊಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆಸುಧಾಮೂರ್ತಿ ಹೇಳಿದರು.

ಬನಶಂಕರಿಯಲ್ಲಿರುವ ನ್ಯಾಷನಲ್‌ ಹಿಲ್‌ ವ್ಯೂ ಪಬ್ಲಿಕ್‌ ಶಾಲೆಯಲ್ಲಿ ಮಾನವೀಯ ಮೌಲ್ಯಗಳ ಶಿಕ್ಷಣ
ಪ್ರಯೋಗಾಲಯಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಹೆಚ್ಚು ಅಂಕ ಗಳಿಸಲು ಪೋಷಕರು ಮಕ್ಕಳ ಮೇಲೆ ಒತ್ತಡ ಹಾಕುತ್ತಾರೆ. ಶೇ 90ರಷ್ಟು ಅಂಕ ಗಳಿಸಿದರೂ ಸಮಾಧಾನ ಇರುವುದಿಲ್ಲ. ಪಕ್ಕದ ಮನೆಯ ಮಕ್ಕಳು, ಇತರೆ ವಿದ್ಯಾರ್ಥಿಗಳೊಂದಿಗೆ ಹೋಲಿಕೆ ಮಾಡುತ್ತಾರೆ. ಇದು ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಂಕಗಳೇ ಸರ್ವಸ್ವ ಅಲ್ಲ. ಜೀವನದಲ್ಲಿ ಮಾನವೀಯ ಮೌಲ್ಯಗಳೊಂದಿಗೆ, ಎಲ್ಲ ಪರಿಸ್ಥಿತಿಯನ್ನೂ ಧೈರ್ಯ ಎದುರಿಸುವ ಆತ್ಮವಿಶ್ವಾಸವನ್ನು ಅವರಲ್ಲಿ ಬೆಳೆಸಬೇಕು’ ಎಂದು ಕರೆ ನೀಡಿದರು.

ADVERTISEMENT

‘ನನ್ನ ಹಲವು ವಿದ್ಯಾರ್ಥಿಗಳು ಅತ್ಯುತ್ತಮ ಅಂಕ ಗಳಿಸಿದ್ದರೂ ಅವರು ಜೀವನದಲ್ಲಿ ಯಶಸ್ಸು ಸಾಧಿಸದಿರುವ ಸಾಕಷ್ಟು ಉದಾಹರಣೆಗಳಿವೆ. ಮಕ್ಕಳ ತಪ್ಪುಗಳನ್ನು ಮೊದಲು ಮನೆಯಲ್ಲಿ ಅದರಲ್ಲೂ ತಾಯಿ ಸರಿಪಡಿಸಬೇಕು’ ಎಂದರು.

‘ಮಾನವೀಯ ಮೌಲ್ಯಗಳನ್ನು ಶಿಕ್ಷಣದ ಜೊತೆಗೆ ಹೇಳಿಕೊಟ್ಟು, ಅವರ ಪ್ರಶ್ನೆಗಳಿಗೆ ಇಲ್ಲಿಯೇ ಉತ್ತರ ಕಂಡುಕೊಳ್ಳುವ ಪ್ರಯೋಗಾಲಯಗಳು ಬಹಳ ಮುಖ್ಯ. ಇಂತಹ ಪ್ರಯೋಗಾಲಯಗಳು ರಾಜ್ಯದ ಎಲ್ಲ ಶಾಲೆಗಳಲ್ಲೂ ಇರಬೇಕು ಎಂಬುದು ನನ್ನ ಬಯಕೆ’ ಎಂದರು.

‘ನಮ್ಮ ಪ್ರಾಂಶುಪಾಲರು ಹಾಗೂ ಅವರ ತಂಡ ಮಾನವೀಯ ನಾಯಕ ರನ್ನು ಪರಿಚಯಿಸುವ ಪರಿಕಲ್ಪನೆಗೆ ಮುಂದಾಗಿದ್ದಾರೆ. ನಿಮಗೆ ನೀವೇ ನಾಯಕರು. ನೀವು ನಿಮ್ಮಲ್ಲಿರುವ ಪ್ರತಿಭೆ, ಮಾಹಿತಿಯನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಕು, ಬೇರೆಯವರ ಬಗ್ಗೆ ಕಾಳಜಿ ಹೊಂದಿರಬೇಕು’ ಎಂದುನ್ಯಾಷನಲ್ ಎಜುಕೇಷನ್ ಫೌಂಡೇಷನ್ (ಎನ್ಇಎಫ್) ಅಧ್ಯಕ್ಷ ಡಿ.ಕೆ. ಶಿವಕುಮಾರ್ ನುಡಿದರು.

‘ಮೂರು ವರ್ಷಗಳ ಹಿಂದೆ ಮಾನವೀಯ ಮೌಲ್ಯಾಧಾರಿತ ಶಿಕ್ಷಣದ ಆಲೋಚನೆ ಆರಂಭವಾಯಿತು. ನಮ್ಮ ಪ್ರಾಂಶು ಪಾಲರು ಹಾಗೂ ಶಿಕ್ಷಕರ ತಂಡದ ಪರಿಶ್ರಮದೊಂದಿಗೆ ಈ ಪ್ರಯೋಗಾಲಯ ಜೀವ ತಾಳಿದೆ. ಮುಂದಿನ ಐದಾರು ವರ್ಷದಲ್ಲಿ ಇದರ ಪ್ರಭಾವ ಅರಿವಾಗಲಿದೆ’ ಎಂದುಸಂಸ್ಥೆಯ ಟ್ರಸ್ಟಿ ಕಾರ್ಯದರ್ಶಿ ಐಶ್ವರ್ಯ ಡಿ.ಕೆ.ಎಸ್. ಹೆಗ್ಡೆ
ಹೇಳಿದರು.

ಡಾ. ಬಿಂದು ಹರಿ, ಹೆಚ್ಚುವರಿ ಟ್ರಸ್ಟಿ ಕಾರ್ಯದರ್ಶಿ ವೆಂಕಟಪ್ಪ, ಟ್ರಸ್ಟಿಗಳಾದ ಡಿ.ಕೆ. ಸುರೇಶ್, ಉಷಾ ಶಿವಕುಮಾರ್, ಶಶಿಕುಮಾರ್, ಕೆ. ಶ್ರೀನಿವಾಸ್, ಪ್ರಾಂಶುಪಾಲರಾದ ನಿರ್ಮಲಾ ಕೃಷ್ಣನ್, ಉಪ ಪ್ರಾಂಶುಪಾಲರಾದ ಲಿಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.