ADVERTISEMENT

‘ಗ್ರಾಮಾಂತರ ಜಿಲ್ಲೆ ಹೆಸರು ಬದಲಿಸಲು ಬಿಡಲ್ಲ’

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 16:15 IST
Last Updated 18 ಜುಲೈ 2025, 16:15 IST
‘ಬೆಂಗಳೂರು ಗ್ರಾಮಾಂತರ ಜಿಲ್ಲೆ’ ಹೆಸರನ್ನು ಬದಲಿಸದಂತೆ ಆಗ್ರಹಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಉಳಿವಿಗಾಗಿ ಹೋರಾಟ ಸಮಿತಿಯವರು ಪ್ರತಿಭಟನೆ ನಡೆಸಿದರು 
‘ಬೆಂಗಳೂರು ಗ್ರಾಮಾಂತರ ಜಿಲ್ಲೆ’ ಹೆಸರನ್ನು ಬದಲಿಸದಂತೆ ಆಗ್ರಹಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಉಳಿವಿಗಾಗಿ ಹೋರಾಟ ಸಮಿತಿಯವರು ಪ್ರತಿಭಟನೆ ನಡೆಸಿದರು    

ನೆಲಮಂಗಲ: ಅಭಿವೃದ್ಧಿಯ ಹೆಸರಲ್ಲಿ ಬೆಂಗಳೂರು ಗ್ರಾಮಾಂತರ’ ಹೆಸರನ್ನು ‘ಬೆಂಗಳೂರು ಉತ್ತರ ಜಿಲ್ಲೆ’ ಎಂದು ಬದಲಿಸುವುದನ್ನು ವಿರೋಧಿಸಿ ‘ಬೆಂಗಳೂರು ಗ್ರಾಮಾಂತರ ಜಿಲ್ಲೆ ಉಳಿಸಿ ಹೋರಾಟ ಸಮಿತಿಯವರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಕಾರರು ‘ಉಳಿಸಿ ಉಳಿಸಿ ಗ್ರಾಮಾಂತರ ಉಳಿಸಿ’ ಎಂದು ಘೋಷಣೆಗಳನ್ನು ಕೂಗುತ್ತ ಪ್ರವಾಸಿ ಮಂದಿರದಿಂದ ತಾಲ್ಲೂಕು ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿ ತಹಶೀಲ್ದಾರ್‌ ಅವರಿಗೆ ಮನವಿಪತ್ರ ಸಲ್ಲಿಸಿದರು.

ಪ್ರತಿಭಟನಕಾರರನ್ನು ಉದ್ದೆಶಿಸಿ ಮಾತನಾಡಿದ ಹೋರಾಟ ಸಮಿತಿ ಅಧ್ಯಕ್ಷ ಉಮೇಶ್ ಗೌಡ, ‘ಪಟ್ಟಭದ್ರರು ತಮ್ಮ ಬೇನಾಮಿ ಆಸ್ತಿಗಳ ಮೌಲ್ಯ ಹೆಚ್ಚಿಸಿಕೊಳ್ಳಲು ಜಿಲ್ಲೆ ಹೆಸರು ಬದಲಿಸಲು ಹೊರಟಿದ್ದಾರೆ. ಅಭಿವೃದ್ಧಿ ಹೆಸರಲ್ಲಿ ಅನಗತ್ಯವಾಗಿ ಜಿಲ್ಲೆಯ ಹೆಸರು ಬದಲಿಸಿಕೂಡದು’ ಎಂದು ಒತ್ತಾಯಿಸಿದರು. 

ADVERTISEMENT

ಉಪಾಧ್ಯಕ್ಷ ಬಿ.ನರಸಿಂಹಯ್ಯ ಮಾತನಾಡಿ, ‘ಬೆಂಗಳೂರು ಉತ್ತರ ಜಿಲ್ಲೆಯನ್ನಾಗಿ ಬದಲಿಸುವುದರಿಂದ ಶೈಕ್ಷಣಿಕ ಮೀಸಲಾತಿ ಕಳೆದುಕೊಳ್ಳಬೇಕಾಗುತ್ತದೆ. ಎಲ್ಲ ದಾಖಲೆಗಳ ತಿದ್ದುಪಡಿಗೆ ಸಾರ್ವಜನಿಕರು ಅಲೆದಾಡ ಬೇಕಾಗುತ್ತದೆ. ಭ್ರಷ್ಟಾಚಾರಕ್ಕೆ ಸರ್ಕಾರವೇ ದಾರಿ ಮಾಡಿಕೊಟ್ಟಂತಾಗುತ್ತದೆ’ ಎಂದು ದೂರಿದರು.

‘ಹೆಸರು ಬದಲಿಸುವ ಕುರಿತು ಯಾವುದೇ ಪ್ರಕಟಣೆ ನೀಡಿಲ್ಲ. ಸಾರ್ವಜನಿಕ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿಲ್ಲ. ಈ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು’ ಎಂದು ತಿಳಿಸಿದರು.

ಸಮಿತಿಯ ಮುಖಂಡರಾದ ಬಿ.ಎಂ.ಗಂಗಬೈಲಪ್ಪ, ಎಚ್‌.ಜಿ.ರಾಜು, ಎನ್‌.ಆರ್‌.ನಾಗರಾಜು, ಎ.ಕೇಶವಮೂರ್ತಿ, ಆನಂದ ಮೌರ್ಯ, ಡಿ.ಸಿದ್ದರಾಜು, ರಂಗಸ್ವಾಮಿ, ವೆಂಕಟೇಶ್‌ ಚೌಥಾಯಿ ಇತರರು ಪ್ರತಿಭಟನೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.