
ಬೆಂಳೂರು: ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಕೆರೆಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ವಿವಿಧ ವಿಷಯಗಳ ಕುರಿತು ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 59 ಕೆರೆಗಳಿವೆ. ಈ ಪೈಕಿ 43 ಕೆರೆಗಳಲ್ಲಿ ಸಮೀಕ್ಷೆ ಹಾಗೂ ಮಾರ್ಕಿಂಗ್ ಕಾರ್ಯ ಪೂರ್ಣಗೊಂಡಿದ್ದು, 21 ಕೆರೆಗಳಲ್ಲಿ ಒತ್ತುವರಿ ತೆರವಿಗಾಗಿ ಈಗಾಗಲೇ ನೋಟಿಸ್ ನೀಡಲಾಗಿದೆ. ಅವುಗಳ ತೆರವು ಕಾರ್ಯಾಚರಣೆ ಕೂಡಲೇ ನಡೆಸಬೇಕು ಎಂದರು.
ಸರ್ಕಾರಿ ಜಾಗಗಳಲ್ಲಿ ಒತ್ತುವರಿ ಪತ್ತೆ ಮಾಡಿ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಇದರಲ್ಲಿ ವಿಫಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ನಗರದಲ್ಲಿ ಅಂತರ್ಜಲ ವೃದ್ಧಿಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಬಾವಿಗಳ ಸಮೀಕ್ಷೆ ನಡೆಸಿ, ಅವುಗಳ ಪುನಶ್ಚೇತನಕ್ಕಾಗಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಮಾತನಾಡಿ, ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವ ಉದ್ದೇಶದಿಂದ ನಿರಂತರವಾಗಿ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಗಳನ್ನು ನಿಯಮಿತವಾಗಿ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
12 ಬಸ್ ತಂಗುದಾಣಗಳ ಪೈಕಿ 9 ಕಡೆ ಈಗಾಗಲೇ ಸ್ಥಳಾಂತರ ಪೂರ್ಣಗೊಂಡಿದ್ದು, ಉಳಿದ ಮೂರು ಕಡೆಗಳಲ್ಲಿ ಶೀಘ್ರದಲ್ಲೇ ಸ್ಥಳಾಂತರ ಕಾರ್ಯ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಮೆಟ್ರೊ ಕಾರಿಡಾರ್‌ಗಳಿಗೆ ಸಂಪರ್ಕ ಹೊಂದಿರುವ ಪ್ರಮುಖ ರಸ್ತೆಗಳಲ್ಲಿ ‘ಲೈಟ್ ಟೆಂಡರ್ ಶೂರ್ ಮಾದರಿ’ ಅಳವಡಿಸಿ, ಹಸಿರು ಮೆಟ್ರೊ ಮಾರ್ಗದ ತಲಘಟ್ಟಪುರ, ಸಿಲ್ಕ್ ಇನ್‌ಸ್ಟಿಟ್ಯೂಟ್, ವಾಜರಹಳ್ಳಿ, ಕೋಣನಕುಂಟೆ, ಜೆ.ಪಿ ನಗರ, ಸೌತ್ ಎಂಡ್ ರೋಡ್, ನ್ಯಾಷನಲ್ ಕಾಲೇಜು–1 ಮತ್ತು 2, ಚಿಕ್ಕಪೇಟೆ ಹಾಗೂ ಕೆ.ಆರ್. ಮಾರ್ಕೆಟ್ ಮೆಟ್ರೊ ನಿಲ್ದಾಣಗಳಿಗೆ ‘ಲಾಸ್ಟ್ ಮೈಲ್ ಕನೆಕ್ಟಿವಿಟಿ’ ಒದಗಿಸುವ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುತ್ತಿದೆ ಎಂದು ವಿವರಿಸಿದರು.
ಸುರಕ್ಷಾ ಯೋಜನೆಯಡಿ ಜಂಕ್ಷನ್‌ಗಳ ಕಾಮಗಾರಿಗಳನ್ನು ಮಾರ್ಚ್ ಒಳಗೆ ಪೂರ್ಣಗೊಳಿಸಬೇಕು. ರಸ್ತೆಗುಂಡಿಗಳನ್ನು ಮುಚ್ಚುವ ಸಲುವಾಗಿ ಜೆಟ್ ಪ್ಯಾಚರ್ ಯಂತ್ರವನ್ನು ಖರೀದಿಸಬೇಕು. ಪ್ರವಾಹ ಪೀಡಿತ ಪ್ರದೇಶಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕು. ಕೆರೆಗಳಿಗೆ ತೂಬುಗಳನ್ನು ಅಳವಡಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.