ADVERTISEMENT

ಬೆಂಗಳೂರು: ಒಪಿಎಸ್‌ ಜಾರಿಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2025, 20:40 IST
Last Updated 7 ಫೆಬ್ರುವರಿ 2025, 20:40 IST
   

ಬೆಂಗಳೂರು: ‘ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಗೊಳಿಸಿ, ಹಳೆ ಪಿಂಚಣಿ ಯೋಜನೆ (ಒಪಿಎಸ್‌) ಜಾರಿಗೊಳಿಸಬೇಕು’ ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘದಿಂದ ಶುಕ್ರವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ನಡೆಯಿತು.

ಎನ್‌ಪಿಎಸ್‌ ಅನ್ನೇ ಯುಪಿಎಸ್‌ ಹೆಸರಲ್ಲಿ ಜಾರಿ ಮಾಡುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು. ‘ಇದು ಒಂದು ದಿನಕ್ಕೆ ಸೀಮಿತವಾದ ಧರಣಿ ಎಂದು ಸರ್ಕಾರ ಭಾವಿಸಬಾರದು. ಬೇಡಿಕೆ ಈಡೇರದಿದ್ದರೆ ಮತ್ತೆ ಹೋರಾಟ ಮುಂದುವರಿಸಲಾಗುವುದು’ ಎಂದು ಪ್ರತಿಭಟನಕಾರರು ಎಚ್ಚರಿಸಿದರು.

‘ವಿಧಾನಸಭಾ ಚುನಾವಣೆಯ ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಭರವಸೆಯಂತೆ ಎನ್‌ಪಿಎಸ್‌ ರದ್ದುಗೊಳಿಸುವುದನ್ನು 2025–26ನೇ ಸಾಲಿನ ಬಜೆಟ್‌ನಲ್ಲಿ ಪ್ರಕಟಿಸಬೇಕು’ ಎಂದು ಸಂಘದ ಅಧ್ಯಕ್ಷ ಶಾಂತರಾಮ ಆಗ್ರಹಿಸಿದರು.

ADVERTISEMENT

‘ಎನ್‌ಪಿಎಸ್‌ ಅನ್ನು ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್‌) ಎಂದು ಹೆಸರಿಟ್ಟು ಜಾರಿಮಾಡಲು ಸಿದ್ಧತೆ ನಡೆಸಿದೆ. ನಮಗೆ ಯುಪಿಎಸ್‌, ಎನ್‌ಪಿಎಸ್‌ ಬೇಡ. ಹಳೇ ಪಿಂಚಣಿ ಯೋಜನೆಯನ್ನೇ ಜಾರಿ ಮಾಡಬೇಕು’ ಎಂದು ಒತ್ತಾಯಿಸಿದರು.

ಸಂಘದ ಪದಾಧಿಕಾರಿಗಳಾದ ಎಸ್‌.ಎಸ್. ಹದ್ಲಿ, ದೊಡ್ಡ ತಮ್ಮೇಗೌಡ, ರಂಗನಾಥ ಜಿ., ಉಮೇಶ ತೋಟದ, ದಯಾನಂದ ಎಲ್‌.ಎಂ., ರಜನಿಕಾಂತ ಎಸ್.ಟಿ., ಶಶಿಕಲಾ ಎನ್‌.ಕೆ., ವೃಷಭೇಂದ್ರ ಎಸ್. ಹಿರೇಮಠ, ಗಜೇಂದ್ರ ಎ.ಎನ್‌., ರಾಜು ಮಾಳವಾಡ ಸಹಿತ ಸಾವಿರಾರು ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.