ಬೆಂಗಳೂರು: ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್‌ಐಆರ್ ಕೋಟಾ ನಿಗದಿ ಮಾಡಿರುವುದನ್ನು ವಿರೋಧಿಸಿದ ಭಾರತೀಯ ವೈದ್ಯರ ಸಂಘದ ಕರ್ನಾಟಕ ಘಟಕದ ಮಾಜಿ ಅಧ್ಯಕ್ಷ ಡಾ. ಮಧುಸೂದನ ಕಾರಿಗನೂರು, ‘ವೈದ್ಯಕೀಯ ಕಾಲೇಜುಗಳನ್ನು ನಡೆಸಲಾಗದಷ್ಟು ರಾಜ್ಯ ಸರ್ಕಾರ ದಿವಾಳಿಯಾಗಿದೆಯೇ’ ಎಂದು ಪ್ರಶ್ನಿಸಿದರು.
ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿನ ಶೇ 15ರಷ್ಟು ಎನ್‌ಆರ್‌ಐ ಕೋಟಾ ಹಿಂಪಡೆಯುವಂತೆ ಆಗ್ರಹಿಸಿ ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆ ನಗರದ ಗಾಂಧಿ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿದ್ಯಾರ್ಥಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು.
ಹಿಂದೆ ವೈದ್ಯಕೀಯ ಸೇವಾ ಕ್ಷೇತ್ರವಾಗಿತ್ತು. ಶಿಕ್ಷಣದ ಖಾಸಗೀಕರಣದ ಪರಿಣಾಮವಾಗಿ ವೈದ್ಯರು ಮತ್ತು ರೋಗಿಗಳ ನಡುವಿನ ಸಂಬಂಧ ವ್ಯಾಪಾರವಾಗಿ ಬದಲಾಗಿದೆ. ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎನ್ಆರ್ಐ ಕೋಟಾ ತರುವುದರ ಮೂಲಕ ಖಾಸಗೀಕರಣ ಮಾಡುವುದು ಸರ್ಕಾರದ ಹುನ್ನಾರವಾಗಿದ್ದು, ಇದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಎಐಡಿಎಸ್ಒನ ಅಖಿಲ ಭಾರತ ಉಪಾಧ್ಯಕ್ಷ ಮೃದುಲ್ ಸರ್ಕಾರ್ ಮಾತನಾಡಿ, ‘ಎನ್‌ಆರ್‌ಐ ಕೋಟಾವನ್ನು ಪಶ್ಚಿಮ ಬಂಗಾಳದಲ್ಲಿ ಮೊದಲು ಬಾರಿಗೆ ಜಾರಿಗೊಳಿಸಿದಾಗ ಹೋರಾಟ ಮಾಡಿದ್ದೆವು. ಇದರ ಪರಿಣಾಮ ಆದೇಶ ಹಿಂಪಡೆಯಬೇಕಾಯಿತು. ಕರ್ನಾಟಕದಲ್ಲೂ 2019ರಲ್ಲಿ ಈ ನೀತಿ ಜಾರಿ ಮಾಡಿದಾಗ ವಿದ್ಯಾರ್ಥಿಗಳ ಹೋರಾಟದಿಂದ ಸ್ಥಗಿತಗೊಳಿಸಲಾಯಿತು. ಈಗ ಮತ್ತೆ ಇದನ್ನು ತರಲಾಗಿದೆ’ ಎಂದು ದೂರಿದರು.
‘ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಎನ್‌ಇಪಿ-2020 ಮತ್ತು ಎನ್ಎಂಸಿ ನೀತಿಗಳು ವೈದ್ಯಕೀಯ ಶಿಕ್ಷಣದಲ್ಲಿ ವ್ಯಾಪಾರೀಕರಣವನ್ನು ಉತ್ತೇಜಿಸುತ್ತವೆ. ಇದನ್ನೇ ಬಳಸಿ ಎನ್‌ಆರ್‌ಐ ಕೋಟಾ ಜಾರಿ ಮೂಲಕ ಪ್ರತಿ ವೈದ್ಯಕೀಯ ಸೀಟಿಗೆ ₹25 ಲಕ್ಷ ನಿಗದಿ ಮಾಡಲಾಗುತ್ತಿದೆ. ಈ ನೀತಿಯ ವಿರುದ್ಧ ಹೋರಾಟವನ್ನು ಬಲಪಡಿಸಬೇಕು’ ಎಂದು ಹೇಳಿದರು.
ಮನೋವೈದ್ಯ ಡಾ.ಶಶಿಧರ್ ಬಿಳಗಿ ಮಾತನಾಡಿದರು. ಎಐಡಿಎಸ್ಒ ರಾಜ್ಯ ಖಜಾಂಚಿ ಸುಭಾಷ್ ಬಿ.ಜೆ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್, ಉಪಾಧ್ಯಕ್ಷರಾದ ಅಭಯಾ ದಿವಾಕರ್, ಚಂದ್ರಕಲಾ, ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ್, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ವಿನಯ್ ಚಂದ್ರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.