ADVERTISEMENT

ಆರೈಕೆಗೆ ಹೋದ ಮನೆಯಲ್ಲೇ ಚಿನ್ನಾಭರಣ ಕದ್ದ ಶುಶ್ರೂಷಕಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2021, 20:13 IST
Last Updated 27 ಡಿಸೆಂಬರ್ 2021, 20:13 IST

ಬೆಂಗಳೂರು: ಅನಾರೋಗ್ಯ ಪೀಡಿತ ಮಹಿಳೆಯೊಬ್ಬರ ಆರೈಕೆಗೆ ನಿಯೋಜನೆಯಾಗಿದ್ದ ಶುಶ್ರೂಷಕಿ, ಮಹಿಳೆಯ ಮನೆಯಲ್ಲಿದ್ದ ಚಿನ್ನಾಭರಣ ಕಳ್ಳತನ ಮಾಡಿದ್ದು, ಆಕೆಯನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಠಾಣೆ ವ್ಯಾಪ್ತಿಯ ವೆಂಕಟಪ್ಪ ಬಡಾವಣೆಯಲ್ಲಿ ವಾಸವಿದ್ದ ಮೇಲೂರಪ್ಪ ಎಂಬುವರ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ನೋಡಿಕೊಳ್ಳಲು ಡಿ ನೋವಾ ಏಜೆನ್ಸಿಯಿಂದ ಪವಿತ್ರ ಎಂಬಾಕೆಯನ್ನು ನಿಯೋಜಿಸಲಾಗಿತ್ತು. ಮೇಲೂರಪ್ಪನವರ ಹಿರಿಯ ಪುತ್ರಿ ಊರಿಗೆ ಹೋಗುವ ವೇಳೆ ಚಿನ್ನಾಭರಣಗಳನ್ನೆಲ್ಲಾ ಬೀರುವಿನಲ್ಲಿ ಇಟ್ಟಿದ್ದರು. ಈ ವಿಷಯವನ್ನು ತಾಯಿಗೆ ತಿಳಿಸಿದ್ದರು. ಅದನ್ನು ಕೇಳಿಸಿಕೊಂಡಿದ್ದ ಪವಿತ್ರ ಯಾರೂ ಇಲ್ಲದ ಹೊತ್ತಿನಲ್ಲಿ ಅದನ್ನು ಕದ್ದಿದ್ದರು. ಬಳಿಕ ತನ್ನ ತಾಯಿಯ ಆರೋಗ್ಯ ಸರಿ ಇಲ್ಲ ಎಂದು ತಿಳಿಸಿ ಕದ್ದ ಚಿನ್ನಾಭರಣಗಳೊಂದಿಗೆ ಊರಿಗೆ ಪರಾರಿಯಾಗಿದ್ದಳು’ ಎಂದು ಪೊಲೀಸರು ತಿಳಿಸಿದರು.

‘ಊರಿಗೆ ಹೋದ ಮೇಲೆ ದಿನವೂ ಕರೆ ಮಾಡಿ ಮಹಿಳೆಯ ಆರೋಗ್ಯ ವಿಚಾರಿಸುತ್ತಿದ್ದರು. ಚಿನ್ನಾಭರಣ ಕಳವು ಆಗಿರುವುದು ಮನೆಯವರ ಗಮನಕ್ಕೆ ಬಂದಿಲ್ಲ ಎಂಬುದು ಖಾತರಿಯಾದ ನಂತರ ಮತ್ತೆ ವಾಪಸ್ಸಾಗಿದ್ದಳು’ ಎಂದಿದ್ದಾರೆ.

ADVERTISEMENT

‘ಇದೇ 10ರಂದು ಮೇಲೂರಪ್ಪನವರ ಮನೆಗೆ ಬಂದಿದ್ದ ಸಂಬಂಧಿಕರೊಬ್ಬರು ಅನಾರೋಗ್ಯ ಪೀಡಿತ ಮಹಿಳೆಯ ಕೊರಳಿನಲ್ಲಿ ಚಿನ್ನದ ಸರ ಇಲ್ಲದ್ದನ್ನು ಗಮನಿಸಿದ್ದರು. ಸರ ಹಾಕಿಕೊಳ್ಳುವಂತೆ ತಿಳಿಸಿದ್ದರು. ಆಗ ಬೀರುವಿನ ಬಾಗಿಲು ತೆರೆದು ನೋಡಿದಾಗ ಚಿನ್ನಾಭರಣ ಕಳವಾಗಿರುವುದು ಗೊತ್ತಾಗಿತ್ತು. ವಿಷಯ ತಿಳಿದೊಡನೆ ಶುಶ್ರೂಷಕಿ ಎದೆನೋವಿನ ನಾಟಕವಾಡಿದ್ದಳು. ಮನೆಯವರೇ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಂದ ಆಕೆ ಪರಾರಿಯಾಗಿದ್ದಳು. ಅನುಮಾನಗೊಂಡಿದ್ದ ಮನೆಯವರು ಆಕೆಯ ವಿರುದ್ಧವೇ ದೂರು ದಾಖಲಿಸಿದ್ದರು. ವಿಚಾರಣೆ ವೇಳೆ ತಾನು ಕಳ್ಳತನ ಮಾಡಿದ್ದಾಗಿ ಶುಶ್ರೂಷಕಿ ಒಪ್ಪಿಕೊಂಡಿದ್ದಳು’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.