ADVERTISEMENT

ಶುಶ್ರೂಷಕರು ಯೋಧರು: ಬಿಎಸ್‌ವೈ

ಫ್ಲಾರೆನ್ಸ್‌ ನೈಟಿಂಗೇಲ್‌ ಜನ್ಮದಿನ ಮತ್ತು ಅಂತರರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 12 ಮೇ 2020, 19:41 IST
Last Updated 12 ಮೇ 2020, 19:41 IST
ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ನಡೆದ ಫ್ಲಾರೆನ್ಸ್‌ ನೈಟಿಂಗೇಲ್‌ ಅವರ 200ನೇ ಜನ್ಮದಿನ ಮತ್ತು ಅಂತರರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರ ಜತೆ ಶುಶ್ರೂಷಕರು ಇದ್ದರು
ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ನಡೆದ ಫ್ಲಾರೆನ್ಸ್‌ ನೈಟಿಂಗೇಲ್‌ ಅವರ 200ನೇ ಜನ್ಮದಿನ ಮತ್ತು ಅಂತರರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರ ಜತೆ ಶುಶ್ರೂಷಕರು ಇದ್ದರು   

ಬೆಂಗಳೂರು: ‘ಕೊರೊನಾ ವಿರುದ್ಧದ ಯುದ್ಧದಲ್ಲಿ ಶುಶ್ರೂಷಕರು ಯೋಧರಂತೆ ಮುಂಚೂಣಿಯಲ್ಲಿ ನಿಂತು ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಮಂಗಳವಾರ ಆಯೋಜಿಸಿದ್ದ ಫ್ಲಾರೆನ್ಸ್‌ ನೈಟಿಂಗೇಲ್‌ ಅವರ 200ನೇ ಜನ್ಮದಿನ ಮತ್ತು ಅಂತರರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಅನೇಕ ಒತ್ತಡಗಳ ನಡುವೆಯೂ ಶುಶ್ರೂಷಕರು ತಾಳ್ಮೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ವೈದ್ಯರ ಜತೆಗೆ ದಾದಿಯರು ಮತ್ತು ಶುಶ್ರೂಷಕರು ತೋರುವ ಕಾಳಜಿ ಮತ್ತು ಆರೈಕೆ ರೋಗಿಗಳ ಮನೋಬಲ ಹೆಚ್ಚಿಸುತ್ತದೆ’ ಎಂದು ಯಡಿಯೂರಪ್ಪ ಅವರು ಹೇಳಿದರು.

ADVERTISEMENT

‘ವಿಶ್ವದೆಲ್ಲೆಡೆ ಶುಶ್ರೂಷಕರಿಗೆ ಅಪಾರ ಬೇಡಿಕೆ ಇದೆ. ಕೋವಿಡ್–19 ವಿರುದ್ಧದ ಈ ಹೋರಾಟದಲ್ಲಿ ಜೀವದ ಹಂಗು ತೊರೆದು ಅವರು ನೀಡುತ್ತಿರುವ ಸೇವೆ ಇದೇ ರೀತಿ ಮುಂದುವರಿಯಲಿ’ ಎಂದೂ ಅವರು ಇದೇ ವೇಳೆ ಹಾರೈಸಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ವಿಶ್ವವಿದ್ಯಾಲಯದ ಕುಲಪತಿ ಡಾ.ಸಚ್ಚಿದಾನಂದ, ಕುಲಸಚಿವ ಶಿವಾನಂದ, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಇದ್ದರು.

ಶುಶ್ರೂಷಕರು ಇನ್ನುಮುಂದೆ ‘ಅಧಿಕಾರಿಗಳು’

ಶುಶ್ರೂಷಕರು ಎಂದಿದ್ದ ಪದನಾಮವನ್ನು ‘ಶುಶ್ರೂಷಕ ಅಧಿಕಾರಿಗಳು’ ಎಂದು ಬದಲಿಸಿದ ಆದೇಶ ಹೊರಡಿಸಲಾಗಿದೆ.

ಶುಶ್ರೂಷಕರ ಸೇವೆಯನ್ನು ಗುರುತಿಸಿ ಪದನಾಮ ಬದಲಿಸಲು ನಿರ್ಧರಿಸಲಾಯಿತು. ಪ್ರಧಾನಿ ₹50 ಲಕ್ಷ ವಿಮೆಯನ್ನೂ ಘೋಷಿಸಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

‘ಆರೋಗ್ಯ ಸೇವೆಯ ಬೆನ್ನೆಲುಬಿನಂತಿರುವ ಶುಶ್ರೂಷಕರು ಸಲ್ಲಿಸುತ್ತಿರುವ ಸೇವೆ ಅಭಿನಂದನೀಯ. ಕೊರೊನಾ ವಿರುದ್ಧದ ಹೋರಾಟದಲ್ಲಿ ಇವರ ಪಾತ್ರ ದೊಡ್ಡದು. ಇವರ ಸೇವೆ ಇಲ್ಲದೇ ಹೋಗಿದ್ದರೆ ಇಡೀ ವ್ಯವಸ್ಥೆಯೇ ಬುಡಮೇಲಾಗುತ್ತಿತ್ತು‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.