ADVERTISEMENT

ಆರೋಗ್ಯ ಕ್ಷೇತ್ರದಲ್ಲಿ ನರ್ಸ್‌ಗಳ ಕೊರತೆ: ಡಾ.ದೇವಿ ಶೆಟ್ಟಿ

ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಡಾ. ದೇವಿಶೆಟ್ಟಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2022, 21:46 IST
Last Updated 4 ನವೆಂಬರ್ 2022, 21:46 IST
ಗೋಷ್ಠಿಯಲ್ಲಿ ಪತ್ರಕರ್ತ ಶೇಖರ್‌ ಗುಪ್ತಾ, ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌, ನಾರಾಯಣ ಹೆಲ್ತ್‌ ಸಂಸ್ಥಾಪಕ ಡಾ. ದೇವಿಶೆಟ್ಟಿ ಪಾಲ್ಗೊಂಡಿದ್ದರು
ಗೋಷ್ಠಿಯಲ್ಲಿ ಪತ್ರಕರ್ತ ಶೇಖರ್‌ ಗುಪ್ತಾ, ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌, ನಾರಾಯಣ ಹೆಲ್ತ್‌ ಸಂಸ್ಥಾಪಕ ಡಾ. ದೇವಿಶೆಟ್ಟಿ ಪಾಲ್ಗೊಂಡಿದ್ದರು   

ಬೆಂಗಳೂರು: ‘ಆರೋಗ್ಯ ಕ್ಷೇತ್ರದಲ್ಲಿ ನರ್ಸ್‌ಗಳ ಕೊರತೆ ಇದೆ. ಹೀಗಾಗಿ, 100 ಹಾಸಿಗೆಯ ಆಸ್ಪತ್ರೆಯಲ್ಲಿ ಪ್ರಾಯೋಗಿಕ ತರಬೇತಿಗೆ ಆದ್ಯತೆ ನೀಡುವ ನರ್ಸಿಂಗ್‌ ಕಾಲೇಜುಗಳನ್ನು ಆರಂಭಿಸಬೇಕು’ ಎಂದು ನಾರಾಯಣ ಹೆಲ್ತ್ ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ.ದೇವಿ ಶೆಟ್ಟಿ ಸಲಹೆ ನೀಡಿದರು.

ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಶುಕ್ರವಾರ ‘ಸಾಂಕ್ರಾ ಮಿಕ ಕಾಯಿಲೆ ನಂತರ ಭವಿಷ್ಯದಲ್ಲಿ ಆರೋಗ್ಯ ಬಿಕ್ಕಟ್ಟು ಎದುರಿಸಲು ಯಾವ ರೀತಿ ಸಿದ್ಧತೆ ಕೈಗೊಳ್ಳಬೇಕು’
ಎನ್ನುವ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನರ್ಸ್‌ಗಳಿಗೆ ಈಗ ನೀಡುತ್ತಿರುವ ತರಬೇತಿ ಸಮರ್ಪಕವಾಗಿಲ್ಲ. ತರಬೇತಿ ವ್ಯವಸ್ಥೆಯಲ್ಲಿ
ಆಮೂಲಾಗ್ರ ಬದಲಾವಣೆ ತರಬೇಕಾಗಿದೆ. ಕಲಿಕೆಯ ಹಂತದಲ್ಲೇ ಸಮಗ್ರ ತರಬೇತಿ ನೀಡಬೇಕು’ ಎಂದು ಹೇಳಿದರು.

‘ಸರ್ಕಾರಿ ಆಸ್ಪತ್ರೆಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಬೇಕು. ಈಗ ಕೇವಲ ಮಲೇರಿಯಾ, ಕ್ಷಯರೋಗ, ಎಚ್‌ಐವಿಗಳ ಬಗ್ಗೆ ಮಾತ್ರ ಹೆಚ್ಚು ಗಮನಹರಿಸಲಾಗುತ್ತಿದೆ. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಎಷ್ಟು ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುತ್ತಿದೆ ಎನ್ನುವ ಬಗ್ಗೆ ನಿರಂತರ ನಿಗಾವಹಿಸಬೇಕು. ಆಗ ಸೌಲಭ್ಯಗಳ ಕೊರತೆಯ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ’ ಎಂದು ಹೇಳಿದರು.

ADVERTISEMENT

‘ಭಾರತದಲ್ಲಿ ಕೋವಿಡ್‌ನಿಂದ ಹೆಚ್ಚು ಸಾವುಗಳು ಸಂಭವಿಸಿದ್ದರೂ ನೈಜ ಸ್ಥಿತಿಯನ್ನು ಮರೆಮಾಚಲಾಗಿದೆ ಎಂದು ಹಲವು ಅಂತರರಾಷ್ಟ್ರೀಯ ವರದಿಗಳು ಪ್ರಕಟವಾದವು. ಆದರೆ, ವಾಸ್ತವದಲ್ಲಿ ಭಾರತದಲ್ಲಿ ಕಡಿಮೆ ಸಾವುಗಳು ಸಂಭವಿಸಿವೆ. ಸಾವು ಸಂಭವಿಸುವುದನ್ನು ನಿಯಂತ್ರಿಸುವಲ್ಲಿ ಸರ್ಕಾರ ಅತ್ಯುತ್ತಮ ಕ್ರಮಗಳನ್ನು ಕೈಗೊಂಡಿದೆ’ ಎಂದು
ಪ್ರತಿಪಾದಿಸಿದರು.

ವರ್ಚುವಲ್‌ ವ್ಯವಸ್ಥೆಯ ಮೂಲಕ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್‌, ‘ಆರೋಗ್ಯ ಕ್ಷೇತ್ರದಲ್ಲಿನ ಹೂಡಿಕೆಯನ್ನು ವೆಚ್ಚ ಎಂದು ಪರಿಗಣಿಸಬಾರದು. ಕೋವಿಡ್‌ ಹಲವು ಪಾಠಗಳನ್ನು ಕಲಿಸಿದೆ. ಜನರು ಮಾಸ್ಕ್‌ ಬಳಸುವುದನ್ನು ಮುಂದುವರಿಸಬೇಕು. ಮುಂಜಾಗ್ರತೆಯೇ ಮದ್ದು ಎನ್ನು ವುದನ್ನು ಅರಿತುಕೊಳ್ಳಬೇಕು’ ಎಂದು ಹೇಳಿದರು.

ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಮಾತನಾಡಿ, ‘ಕೋವಿಡ್‌ ನಂತರವೂ ಆರೋಗ್ಯ ಕ್ಷೇತ್ರದ ಸುಧಾರಣೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಐದು ಜಿಲ್ಲೆಗಳಲ್ಲಿ ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗುತ್ತಿದೆ. ಈಗ ಕರ್ನಾಟಕದಲ್ಲಿ
800 ಜನರಿಗೆ ಒಬ್ಬ ವೈದ್ಯರಿದ್ದಾರೆ’ ಎಂದು ವಿವರಿಸಿದರು.

‘ಜನರಿಗೆ ಸುಲಭವಾಗಿ ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಮತ್ತು ಖಾಸಗಿ ವಲಯ ಒಗ್ಗಟ್ಟಿನಿಂದ ಮುಂದಾಗಬೇಕು’ ಎಂದು ತಿಳಿಸಿದರು.

ಪತ್ರಕರ್ತ ಶೇಖರ್‌ ಗುಪ್ತಾ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.