ADVERTISEMENT

ಸುಸಜ್ಜಿತ ಪಾದಚಾರಿ ಮಾರ್ಗ ಮರು ನಿರ್ಮಾಣಕ್ಕೆ ಆಕ್ಷೇಪ

ಹಳೆ ಮದ್ರಾಸ್‌ ರಸ್ತೆಯಲ್ಲಿ ಉನ್ನತೀಕರಣ ಕಾಮಗಾರಿಯಿಂದ ಜನರಿಗೆ ನಡೆದಾಡಲು ಅಡ್ಡಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2021, 21:08 IST
Last Updated 9 ಡಿಸೆಂಬರ್ 2021, 21:08 IST
ಹಳೆ ಮದ್ರಾಸ್ ರಸ್ತೆಯ ಎಚ್‌ಎಎಲ್‌ ವಸತಿ ಸಮುಚ್ಚಯದ ಬಳಿ ಉತ್ತಮವಾಗಿರುವ ಪಾದಚಾರಿ ಮಾರ್ಗದ ಇಂಟರ್ ಲಾಕ್‌ಗಳನ್ನು ಕಾರ್ಮಿಕರೊಬ್ಬರು ಕೀಳುತ್ತಿರುವುದು (ಎಡ ಚಿತ್ರ), ಪಾದಚಾರಿ ಮಾರ್ಗದಲ್ಲಿ ಅಳವಡಿಸಲು ತಂದಿರುವ ಹೊಸ ಇಂಟರ್‌ ಲಾಕ್‌ಗಳನ್ನು ರಸ್ತೆಯಲ್ಲಿಯೇ ಇಡಲಾಗಿದೆ –ಪ್ರಜಾವಾಣಿ ಚಿತ್ರಗಳು/ಅನೂಪ್ ರಾಘ.ಟಿ.
ಹಳೆ ಮದ್ರಾಸ್ ರಸ್ತೆಯ ಎಚ್‌ಎಎಲ್‌ ವಸತಿ ಸಮುಚ್ಚಯದ ಬಳಿ ಉತ್ತಮವಾಗಿರುವ ಪಾದಚಾರಿ ಮಾರ್ಗದ ಇಂಟರ್ ಲಾಕ್‌ಗಳನ್ನು ಕಾರ್ಮಿಕರೊಬ್ಬರು ಕೀಳುತ್ತಿರುವುದು (ಎಡ ಚಿತ್ರ), ಪಾದಚಾರಿ ಮಾರ್ಗದಲ್ಲಿ ಅಳವಡಿಸಲು ತಂದಿರುವ ಹೊಸ ಇಂಟರ್‌ ಲಾಕ್‌ಗಳನ್ನು ರಸ್ತೆಯಲ್ಲಿಯೇ ಇಡಲಾಗಿದೆ –ಪ್ರಜಾವಾಣಿ ಚಿತ್ರಗಳು/ಅನೂಪ್ ರಾಘ.ಟಿ.   

ಬೆಂಗಳೂರು: ಹಳೆ ಮದ್ರಾಸ್ ರಸ್ತೆಯಲ್ಲಿನ ಸುಸಜ್ಜಿತವಾದ ಪಾದಚಾರಿ ಮಾರ್ಗವನ್ನು ಅಗೆದು, ಹೊಸದಾಗಿ ನಿರ್ಮಾಣ ಮಾಡುತ್ತಿರುವುದಕ್ಕೆ ಸ್ಥಳೀಯರಿಂದಆಕ್ಷೇಪ ವ್ಯಕ್ತವಾಗಿದೆ.

ರಾಜ್ಯ ಸರ್ಕಾರವು ‘ಮಿಷನ್‌–2022’ಅಡಿ ತೀವ್ರ ದಟ್ಟಣೆ ಇರುವ 12 ಕಾರಿಡಾರ್‌ಗಳ ಉನ್ನತೀಕರಣ ಹಾಗೂ ನಿರ್ವಹಣೆಯ ಕಾರ್ಯ ಕೈಗೆತ್ತಿಕೊಂಡಿದೆ. ಇದರಲ್ಲಿಹಳೆ ಮದ್ರಾಸ್‌ ರಸ್ತೆ (ಟ್ರಿನಿಟಿ ವೃತ್ತ–ಇಂದಿರಾನಗರ–ಕೆ.ಆರ್‌.ಪುರ ಕೇಬಲ್‌ ಸ್ಟೇ ಸೇತುವೆವರೆಗೆ ಮತ್ತು ಕೆ.ಆರ್‌.ಪುರ ರೈಲ್ವೆ ನಿಲ್ದಾಣ– ಹೂಡಿ–ಹೋಪ್‌ಫಾರ್ಮ್‌– ವೈಟ್‌ಫೀಲ್ಡ್‌) ಕೂಡ ಸೇರಿದೆ. ಹೆಚ್ಚು ವಾಹನ ದಟ್ಟಣೆ ಕಾಣಿಸಿಕೊಳ್ಳುತ್ತಿದ್ದ ಈ ಮಾರ್ಗದ 18.50 ಕಿ.ಮೀ ಅಂತರದಲ್ಲಿ ಚರಂಡಿ, ಪಾದಚಾರಿ ಮಾರ್ಗ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ.

ಹಳೆ ಮದ್ರಾಸ್ ರಸ್ತೆಯಲ್ಲಿ (ಎಚ್‌ಎಎಲ್‌ ವಸತಿ ಸಮುಚ್ಚಯದ ಬಳಿ) ಸದ್ಯಪಾದಚಾರಿ ಮಾರ್ಗದ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಸುಸಜ್ಜಿತವಾಗಿದ್ದಇಂಟರ್ ಲಾಕ್‌ಗಳನ್ನು ಕಳೆದೊಂದು ವಾರದಿಂದ ಕೀಳಲಾಗುತ್ತಿದೆ. ಈಗಾಗಲೇ 200 ಮೀ. ದೂರದವರೆಗೆ ಇಂಟರ್‌ ಲಾಕ್‌ಗಳನ್ನು ಕಿತ್ತು, ಅಲ್ಲಿಯೇ ರಾಶಿ ಹಾಕಲಾಗಿದೆ. ಇದರಿಂದಾಗಿ ಪಾದಚಾರಿಗಳ ಸಂಚಾರಕ್ಕೆ ಅಡ್ಡಿಯಾಗಿದ್ದು, ರಸ್ತೆಯಲ್ಲಿಯೇ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ADVERTISEMENT

ಹೊಸದಾಗಿ ಅಳವಡಿಸಲು ತಂದಿರುವ ಬಣ್ಣದಇಂಟರ್‌ ಲಾಕ್‌ಗಳನ್ನು ರಸ್ತೆಯಲ್ಲಿಯೇ ಇರಿಸಲಾಗಿದೆ. ಇದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ.

ವಾಹನ ದಟ್ಟಣೆ:‘ಕೆಲ ವರ್ಷಗಳ ಹಿಂದಷ್ಟೇ ಪಾದಚಾರಿ ಮಾರ್ಗಕ್ಕೆಇಂಟರ್ ಲಾಕ್‌ಗಳನ್ನು ಅಳವಡಿಸಲಾಗಿತ್ತು. ಈಗ ಅದನ್ನು ಕೀಳಲಾಗುತ್ತಿದೆ.ಉನ್ನತೀಕರಣದ ನೆಪದಲ್ಲಿ ಸುಸಜ್ಜಿತ ಮಾರ್ಗಕ್ಕೆ ಹಣ ವ್ಯಯ ಮಾಡಲಾಗುತ್ತಿದೆ. ಈಗ ಪಾದಚಾರಿ ಮಾರ್ಗವನ್ನು ಅಗೆದುಹಾಕಿರುವುದರಿಂದ ಜನರು ರಸ್ತೆಯಲ್ಲಿಯೇ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳಿಗ್ಗೆ ಹಾಗೂ ಸಂಜೆ ವಾಹನ ದಟ್ಟಣೆ ಉಂಟಾಗುತ್ತಿದೆ’ ಎಂದುಎಚ್‌ಎಎಲ್‌ ವಸತಿ ಸಮುಚ್ಚಯದ ನಿವಾಸಿಗಳು ಬೇಸರ ವ್ಯಕ್ತಪಡಿಸಿದರು.

ಹಳೆ ಮದ್ರಾಸ್ ರಸ್ತೆಯ (ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದ ಕಡೆ) ಇನ್ನೊಂದು ಕಡೆಯ ಪಾದಚಾರಿ ಮಾರ್ಗ ಕಿತ್ತು ಹೋಗಿದ್ದು, ಇಲ್ಲಿ ನಡೆದುಕೊಂಡು ಹೋಗುವ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಇದನ್ನು ಸರಿಪಡಿಸುವ ಬದಲು ಸುಸಜ್ಜಿತವಾಗಿರುವ ಪಾದಚಾರಿ ಮಾರ್ಗವನ್ನು ಅಗೆದು, ಹೊಸದಾಗಿ ನಿರ್ಮಾಣ ಮಾಡುತ್ತಿರುವುದು ಸರಿಯಲ್ಲ ಎಂದು ತಿಳಿಸಿದರು.

‘ಟ್ರಿನಿಟಿ ವೃತ್ತದಿಂದಕೆ.ಆರ್‌.ಪುರದವರೆಗೂ ಸದಾ ವಾಹನ ದಟ್ಟಣೆ ಇರುತ್ತದೆ. ಪಾದಚಾರಿ ಮಾರ್ಗದ ಕಾಮಗಾರಿಯಿಂದ ಜನರು ರಸ್ತೆಯಲ್ಲಿಯೇ ಸಾಗಬೇಕಾಗಿದೆ. ಬೆಳಿಗ್ಗೆ ಮತ್ತು ಸಂಜೆ ವೇಳೆ ವಾಹನ ಸವಾರರು ವೇಗವಾಗಿ ಬರುತ್ತಾರೆ. ಇದರಿಂದಾಗಿ ಪಾದಚಾರಿಗಳು ರಸ್ತೆಯಲ್ಲಿ ಸಾಗುವುದು ಕಷ್ಟವಾಗಿದೆ’ ಎಂದು ಸದಾನಂದನಗರದ ನಿವಾಸಿ ವೆಂಕಟೇಶ್ ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯೆಗೆ ಬಿಬಿಎಂಪಿ ಅಧಿಕಾರಿಗಳು ಲಭ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.