ADVERTISEMENT

ಬೆಲೆ ಏರಿಕೆ ವಿರೋಧಿಸಿ ಜೆಸಿಬಿಗಳೊಂದಿಗೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 20:50 IST
Last Updated 23 ಫೆಬ್ರುವರಿ 2021, 20:50 IST
ಜೆಸಿಬಿ ಯಂತ್ರಗಳೊಂದಿಗೆ ಪ್ರತಿಭಟನೆ ನಡೆಸಿದ ಪ್ರತಿಭಟನಕಾರರು.
ಜೆಸಿಬಿ ಯಂತ್ರಗಳೊಂದಿಗೆ ಪ್ರತಿಭಟನೆ ನಡೆಸಿದ ಪ್ರತಿಭಟನಕಾರರು.   

ಬೊಮ್ಮನಹಳ್ಳಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಏರಿಕೆಯಿಂದಾಗಿ ಜೆಸಿಬಿ, ಟಿಪ್ಪರ್ ಯಂತ್ರಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ನಿತ್ಯವೂ ಏರುತ್ತಿರುವ ಇಂಧನ ಬೆಲೆಗಳನ್ನು ಇಳಿಸಬೇಕೆಂದು ಒತ್ತಾಯಿಸಿ ಜೆಸಿಬಿ, ಟಿಪ್ಪರ್ ಮಾಲೀಕರು ಹೊಸೂರು ರಸ್ತೆಯ ಸಿಂಗಸಂದ್ರದ ಬಳಿ ಪ್ರತಿಭಟನೆ ನಡೆಸಿದರು.

‘ಹೊಸೂರು-ಸರ್ಜಾಪುರ ಜೆಸಿಬಿ ಹಾಗೂ ಟಿಪ್ಪರ್ ಮಾಲೀಕರ ಸಂಘ’ದ ನೇತೃತ್ವದಲ್ಲಿ ಇನ್ನೂರಕ್ಕೂ ಹೆಚ್ಚು ಜೆಸಿಬಿ ಯಂತ್ರಗಳೊಂದಿಗೆ ಸೇರಿದ್ದ ಮಾಲೀಕರು, ಇಂಧನ ಬೆಲೆ ಮಾತ್ರವಲ್ಲದೇ, ಬಿಡಿ ಭಾಗಗಳ ಬೆಲೆಯೂ ಏರಿಕೆ ಆಗಿದೆ. ಇದರಿಂದ ಯಂತ್ರಗಳನ್ನು ನಷ್ಟದಲ್ಲೇ ನಡೆಸುವಂತಾಗಿದೆ ಎಂದು ಕೇಂದ್ರ ಸರ್ಕಾರ ಬೆಲೆಏರಿಕೆ ನೀತಿಯನ್ನು ಕೈಬಿಡಬೇಕೆಂದು ಆಗ್ರಹಿಸಿದರು.

‘ಪ್ರತಿ ಲೀಟರ್ ಡೀಸೆಲ್ ಗೆ ₹50 ಇದ್ದಾಗ ಜೆಸಿಬಿ ಬಾಡಿಗೆ ಪ್ರತಿ ಗಂಟೆಗೆ ₹700 ಇತ್ತು. ಇದೀಗ ಡೀಸೆಲ್ ಬೆಲೆ ₹87 ಆಗಿದೆ. ಆದರೆ, ಬಾಡಿಗೆ ಹೆಚ್ಚಾಗಿಲ್ಲ, ಬಾಡಿಗೆ ದರ ಹೆಚ್ಚು ಮಾಡಿದ್ದಲ್ಲಿ ಗ್ರಾಹಕರಿಗೂ ಹೊರೆಯಾಗಲಿದ್ದು, ಕೇಂದ್ರ ಸರ್ಕಾರ ಡೀಸೆಲ್ ಮೇಲಿನ ತೆರಿಗೆಯನ್ನು ಇಳಿಕೆ ಮಾಡಬೇಕು‘ ಎಂದು ಸಂಘದ ಅಧ್ಯಕ್ಷ ಡಿ.ಕೆ.ಮಧು ಆಗ್ರಹಿಸಿದರು.

ADVERTISEMENT

‘ನವೀಕರಿಸಲಾದ ಎಂಜಿನ್ ಗಳು 7 ರಿಂದ 9 ಲೀಟರ್ ಡೀಸೆಲ್ ಕುಡಿಯುತ್ತವೆ. ಹಳೆಯ ಎಂಜಿನ್‌ಗಳಿಗೆ 5 ಲೀಟರ್ ಮಾತ್ರವೇ ಸಾಕಿತ್ತು. ಮತ್ತೊಂದೆಡೆ ಎಂಜಿನ್ ಬಾಳಿಕೆ ಅವಧಿಯೂ ಕ್ಷೀಣಿಸುತ್ತಿದ್ದು, ಯಂತ್ರಗಳ ನಿರ್ವಹಣೆ ವೆಚ್ಚವೂ ದುಬಾರಿಯಾಗಿದೆ. ಲಾಕ್ ಡೌನ್ ತರುವಾಯ ಬೇಡಿಕೆಯೂ ತಗ್ಗಿದ್ದು, ಆದಾಯವಿಲ್ಲದೇ ಪರಿತಪಿಸುತ್ತಿದ್ದೇವೆ‘ ಎಂದು ಸಂಘದ ಉಪಾಧ್ಯಕ್ಷ ದೇವರಾಜ್ ತಮ್ಮ ಅಳಲು ತೋಡಿಕೊಂಡರು.

‘ಕೊರೊನಾ ಕಾಲಿಟ್ಟ ದಿನದಿಂದ ಬಾಡಿಗೆ ಸಿಗುತ್ತಿಲ್ಲ, ಚಾಲಕರಿಗೆ ವೇತನ ನೀಡಲೂ ಸಾಧ್ಯವಾಗದೇ, ಅತ್ತ ಬ್ಯಾಂಕ್ ಸಾಲ ಮರುಪಾವತಿ ಮಾಡಲಾಗದೇ ಅತೀವ ಸಂಕಷ್ಟಕ್ಕೆ ಸಿಲುಕಿದ್ದೇವೆ. ಸರ್ಕಾರ ಬೆಲೆ ನಿಯಂತ್ರಿಸಲು ಕ್ರಮವಹಿಸಬೇಕು‘ ಎಂದು ಸಂಘದ ಮುಖ್ಯಸ್ಥ ಬಾಬುರೆಡ್ಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.