ADVERTISEMENT

ಸರ್ಕಾರಿ ಜಾಗಕ್ಕೇ ಕೋಟ್ಯಂತರ ಪರಿಹಾರ: ತನಿಖೆ ಲೋಕಾಯುಕ್ತಕ್ಕೆ ಹಸ್ತಾಂತರ

ಓಕಳೀಪುರ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2022, 20:31 IST
Last Updated 14 ಸೆಪ್ಟೆಂಬರ್ 2022, 20:31 IST
   

ಬೆಂಗಳೂರು: ಓಕಳೀಪುರ ಸಿಗ್ನಲ್‌ರಹಿತ ಕಾರಿಡಾರ್ ಯೋಜನೆಗೆ ಅಗತ್ಯವಿದ್ದ 196 ಚದರ ಮೀಟರ್ ಸರ್ಕಾರಿ ಜಾಗಕ್ಕೇ ₹5.92 ಕೋಟಿ ಪರಿಹಾರವನ್ನು ಬಿಬಿಎಂಪಿ ನೀಡಿದ್ದು, ಈ ಪ್ರಕರಣದ ತನಿಖೆ ಈಗ ಲೋಕಾಯುಕ್ತಕ್ಕೆ ಹಸ್ತಾಂತರವಾಗಿದೆ.

ಓಕಳೀಪುರದಲ್ಲಿ 8 ಪಥಗಳ 7 ಕಾರಿಡಾರ್‌ ನಿರ್ಮಿಸುವ ಯೋಜನೆಗೆ ಮೆ. ಖೋಡೇಸ್‌ ಈಶ್ವರಸ್ ಆ್ಯಂಡ್ ಸನ್ಸ್‌ ವಶದಲ್ಲಿದ್ದ 196 ಚದರ ಮೀಟರ್ ಜಾಗ ಅಗತ್ಯವಿದೆ ಎಂಬುದನ್ನು ಬಿಬಿಎಂಪಿ ಅಧಿಕಾರಿಗಳು ಗುರುತಿಸಿದ್ದರು.
ಟಿಡಿಆರ್ (ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕು) ಪಡೆದು ಭೂಮಿ ಹಸ್ತಾಂತರಿಸಲು ಖೋಡೇಸ್ ಕಂಪನಿ ನಿರಾಕರಿಸಿದ್ದರಿಂದ ನಗದು ಪರಿಹಾರ ನೀಡಿತ್ತು.

ಚದರ ಮೀಟರ್‌ಗೆ ₹1.50 ಲಕ್ಷ ಮಾರ್ಗಸೂಚಿ ದರ ಇದ್ದು, ಎರಡು ಪಟ್ಟು ಎಂದರೆ ಚದರ ಅಡಿಗೆ ₹3.01 ಲಕ್ಷ ಪರಿಹಾರ ನೀಡಲು ಬಿಬಿಎಂಪಿ ನಿರ್ಧರಿಸಿತ್ತು. ಅದರಂತೆ ಒಟ್ಟು ₹5.92 ಕೋಟಿ ಪರಿಹಾರ ನಿಗದಿ ಮಾಡಿ ಕೌನ್ಸಿಲ್ ಸಭೆಯಲ್ಲೂ ಅನುಮೋದನೆ ಪಡೆದು ಪರಿಹಾರ ವಿತರಿಸಿ ಭೂಮಿ ಹಸ್ತಾಂತರ ಮಾಡಿಕೊಂಡಿತು.

ADVERTISEMENT

ಈ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಯೋಜನೆಗೆ ರೈಲ್ವೆ ಇಲಾಖೆಯಿಂದ ವಶಕ್ಕೆ ಪಡೆದಿರುವ ಜಾಗದಲ್ಲಿ ತಮ್ಮ ಕಂಪನಿಯ ಜಾಗವೂ ಇದೆ ಎಂದು ಹೈಕೋರ್ಟ್‌ನಲ್ಲಿ ಖೋಡೇಸ್ ಕಂಪನಿ ರಿಟ್ ಅರ್ಜಿ(ಡಬ್ಲ್ಯುಪಿ 16545/ 2019) ಸಲ್ಲಿಸಿತು. ನ್ಯಾಯಾಲಯದ ನಿರ್ದೇಶನದಂತೆ ಬೆಂಗಳೂರು ಸಿಟಿ ಸರ್ವೆ ಭೂ ದಾಖಲೆಗಳ ಉಪ
ನಿರ್ದೇಶಕಿ ಜೆ.ವಿಜಯಾ ಭವಾನಿ ವರದಿ ನೀಡಿದರು. ಅದರ ಪ್ರಕಾರ ಈಗಾಗಲೇ ಪರಿಹಾರ ನೀಡಿ ಹಸ್ತಾಂತರ ಮಾಡಿಕೊಂಡಿರುವ ಜಾಗವೂ ಪಾಲಿಕೆಯ ಸ್ವತ್ತು ಎಂಬುದು ಪತ್ತೆಯಾಯಿತು.

ಸರ್ವೆ ನಡೆಸದೆ ಕೆಲವು ದಾಖಲೆಗಳನ್ನಷ್ಟೇ ನೋಡಿ ಪರಿಹಾರ ನೀಡಿರುವುದು ಇಷ್ಟೆಲ್ಲಾ ಅವಾಂತರಗಳಿಗೆ ಕಾರಣವಾಗಿದೆ. ಬಿಬಿಎಂಪಿಗೆ ನಷ್ಟ ಉಂಟು ಮಾಡಿರುವ ಪಾಲಿಕೆ ವಿಶೇಷ ಆಯುಕ್ತರು, ಮುಖ್ಯ ಆಯುಕ್ತರಾಗಿದ್ದ (ಯೋಜನೆ) ಕೆ.ಟಿ.ನಾಗರಾಜ್, ಭೂಸ್ವಾಧೀನ ವಿಭಾಗದ ಉಪ ಆಯುಕ್ತರು, ಪಶ್ಚಿಮ ವಲಯದ ಜಂಟಿ ಆಯುಕ್ತರು, ಕಾನೂನು ಕೋಶದ ಮುಖ್ಯಸ್ಥ ದೇಶಪಾಂಡೆ, ಮುಖ್ಯ ಲೆಕ್ಕಾಧಿಕಾರಿ ಮಹದೇವ, ಕಾರ್ಯಪಾಲಕ ಎಂಜಿನಿಯರ್ ಮತ್ತು ವಿಶೇಷ ಭೂಸ್ವಾಧೀನಾಧಿಕಾರಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಎಸಿಬಿಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಈ ನಡುವೆ ಎಸಿಬಿ ರದ್ದಾಗಿದ್ದರಿಂದ ತನಿಖೆ ಈಗ ಲೋಕಾಯುಕ್ತಕ್ಕೆ ಹಸ್ತಾಂತರವಾಗಿದೆ.

‘ಕಂದಾಯ, ಭೂಸ್ವಾಧೀನ ಅಧಿಕಾರಿಗಳೇ ಹೊಣೆ’

ದೂರು ಆಧರಿಸಿ ಆಂತರಿಕ ತನಿಖೆ ನಡೆಸಿದ ನಗರಾಭಿವೃದ್ಧಿ ಇಲಾಖೆ, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಸರ್ವೆಯರ್, ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು, ಭೂಸ್ವಾಧೀನ ವಿಭಾಗದ ಅಧಿಕಾರಿಗಳು ಹೊಣೆಗಾರರಾಗುತ್ತಾರೆ ಎಂದು ನಗರಾಭಿವೃದ್ಧಿ ಇಲಾಖೆ ವರದಿ ನೀಡಿದೆ.

ಆಸ್ತಿ ಮಾಲೀಕತ್ವ ದಾವೆ ಹೈಕೋರ್ಟ್‌ನಲ್ಲಿದ್ದು, ಸರ್ಕಾರಕ್ಕೇ ಸೇರಿದ ಆಸ್ತಿ ಎಂಬ ತೀರ್ಪು ಬಂದರೆ ತನಿಖೆಗೆ ಅನುಮತಿ ನೀಡಬಹುದು ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.