ADVERTISEMENT

ಒಳ ಮೀಸಲಾತಿಗೆ ಮುಂದುವರಿದ ಧರಣಿ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2022, 19:45 IST
Last Updated 17 ಡಿಸೆಂಬರ್ 2022, 19:45 IST
ಒಳ ಮೀಸಲಾತಿಗಾಗಿ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ನಟ ಚೇತನ್ ಅಹಿಂಸ ಮಾತನಾಡಿದರು. ಹೋರಾಟಗಾರ ಹೆಣ್ಣೂರು ಶ್ರೀನಿವಾಸ್‌, ಶಿವಣ್ಣ, ರಾಮಣ್ಣ ಮತ್ತು ನಿವೃತ್ತ ಅಧಿಕಾರಿಗಳು ಪಾಲ್ಗೊಂಡಿದ್ದರು
ಒಳ ಮೀಸಲಾತಿಗಾಗಿ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ನಟ ಚೇತನ್ ಅಹಿಂಸ ಮಾತನಾಡಿದರು. ಹೋರಾಟಗಾರ ಹೆಣ್ಣೂರು ಶ್ರೀನಿವಾಸ್‌, ಶಿವಣ್ಣ, ರಾಮಣ್ಣ ಮತ್ತು ನಿವೃತ್ತ ಅಧಿಕಾರಿಗಳು ಪಾಲ್ಗೊಂಡಿದ್ದರು   

ಬೆಂಗಳೂರು: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುತ್ತಿರುವ ಅಹೋರಾತ್ರಿ ಹೋರಾಟ ಆರನೇ ದಿನವೂ ಮುಂದುವರಿದಿದೆ.

ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರೊ. ಬಿ.ಕೃಷ್ಣಪ್ಪನವರ ಸಮಾಧಿಯಿಂದ ಹೊರಟ ಪಾದಯಾತ್ರೆ, ಭಾನುವಾರ(ಡಿ.11) ರಾಜಧಾನಿ ತಲುಪಿದೆ. ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭವಾಗಿದೆ.

‘ಸದಾಶಿವ ಆಯೋಗದ ವರದಿಯ ಗಂಟನ್ನು ಬಿಚ್ಚಿ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲೇಬೇಕು. ಇಲ್ಲದಿದ್ದರೆ 2018ರಲ್ಲಿ ಕಾಂಗ್ರೆಸ್‌ಗೆ ಆದ ಗತಿಯೇ 2023ರಲ್ಲಿ ಬಿಜೆಪಿಗೂ ಆಗಲಿದೆ. ಸದಾಶಿವ ಆಯೋಗದ ವರದಿ ಪರಿಶೀಲನೆಗೆ ಸಂಪುಟ ಉಪಸಮಿತಿ ರಚಿಸಿ ಸುಮ್ಮನಾದರೆ ಸಾಲದು, ಒಳ ಮೀಸಲಾತಿ ಜಾರಿಗೆ ಕೇಂದ್ರಕ್ಕೆ ಕೂಡಲೇ ಶಿಫಾರಸು ಮಾಡಬೇಕು’ ಎಂದು ಹೋರಾಟಗಾರರು ಒತ್ತಾಯಿಸಿದರು.

ADVERTISEMENT

ಹೋರಾಟಕ್ಕೆ ಚಲನಚಿತ್ರ ನಟ ಚೇತನ್ ಅಹಿಂಸ ಬೆಂಬಲ ಸೂಚಿಸಿ ಧರಣಿಯಲ್ಲಿ ಪಾಲ್ಗೊಂಡಿದ್ದರು. ‘ಒಳ ಮೀಸಲಾತಿ ಎಂಬುದು ಕೇವಲ ಒಂದು ಸಮುದಾಯದ ಬೇಡಿಕೆಯಲ್ಲ. ಉತ್ತಮ ಪ್ರಜಾಪ್ರಭುತ್ವಕ್ಕಾಗಿ, ಸಮಾನತೆಯ ಕನಸಿನ ಹೋರಾಟ’ ಎಂದರು.

‘ಪರಿಶಿಷ್ಟ ಜಾತಿಯೊಳಗೆ ಮಾತ್ರವಲ್ಲ, ಪರಿಶಿಷ್ಟ ಪಂಗಡದಲ್ಲೂ ಒಳ ಮೀಸಲಾತಿ ಅಗತ್ಯವಿದೆ. ಸೋಲಿಗ, ಎರವ, ಜೇನುಕುರುಬ, ಬೆಟ್ಟಕುರುಬ, ಇರುಳಿಗ, ಮಲೆಕುಡಿಯ, ಕೊರಗ ರೀತಿಯ ಶೋಷಿತ ಸಮುದಾಯಗಳಿಗೆ ನ್ಯಾಯ ಸಿಗಬೇಕೆಂದರೆ ಅಲ್ಲಿಯೂ ಒಳ ಮೀಸಲಾತಿ ತರಬೇಕಾಗಿದೆ’ ಎಂದು ಹೇಳಿದರು.

ಒಳ ಮೀಸಲಾತಿ ಜಾರಿಯಾದ ಕೆಲವು ದಿನಗಳಲ್ಲಿ ಅಲ್ಲಿಯೂ ದುರ್ಬಲ ಮತ್ತು ನಿರ್ಲಕ್ಷಿತ ಸಮುದಾಯಗಳು ಮೀಸಲಾತಿಯಿಂದ ವಂಚಿತರಾಗುವ ಸಾಧ್ಯತೆ ಇದೆ. ಆದ್ದರಿಂದ ಒಳ ಮೀಸಲಾತಿಯಳಗೂ ಒಳ ಮೀಸಲಾತಿ ತರಬೇಕಾದ ಸಂದರ್ಭಗಳು ಮುಂದೆ ಬರಬಹುದು. ಕಾಲಕ್ಕೆ ತಕ್ಕಂತೆ ಬಹುಜನ ಚಿಂತನೆ ಮುಂದುವರಿಸೋಣ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.